ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದಲ್ಲಿ ಕುಲ್ಗಾಮ್ ಜಿಲ್ಲೆಯ ನವಪುರ ಮೀರ್ ಬಜಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಉಗ್ರರು ಅಡಗಿದ್ದಾರೆ ಎಂಬ ಸುಳಿವಿನ ಮೇರೆಗೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಈ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಉಗ್ರರು ಭದ್ರತಾ ಪಡೆಗಳತ್ತ ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದರು ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಭಯೋತ್ಪಾದಕರಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಸುತ್ತ-ಮುತ್ತಲಿನ ಪ್ರದೇಶಗಳನ್ನು ಭದ್ರತಾ ಸಿಬ್ಬಂದಿ ಸಂಪೂರ್ಣವಾಗಿ ಸುತ್ತುವರಿದರು. ಯಾವ ಕಡೆಯಿಂದಲೂ ಉಗ್ರರು ತಪ್ಪಿಸಿಕೊಳ್ಳದಂತೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.