ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ದಿನದಿಂದ ದಿನಕ್ಕೆ ಶೂಟಿಂಗ್ ಘಟನೆಗಳು ಹೆಚ್ಚಾಗುತ್ತಿವೆ. ಭಾನುವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಒಟ್ಟು 20 ಮಂದಿ ಗಾಯಗೊಂಡಿದ್ದಾರೆ. ಮೊದಲ ಘಟನೆಯು ಮೇರಿಲ್ಯಾಂಡ್‌ನ ಅನ್ನಾಪೊಲಿಸ್‌ನಲ್ಲಿರುವ ಮನೆಯೊಳಗೆ ಸಂಭವಿಸಿದೆ. ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿದ್ದಾರೆ.
ಎರಡನೇ ಘಟನೆ ನ್ಯೂಯಾರ್ಕ್‌ನ ಸಿರಾಕ್ಯೂಸ್ ನಗರದಲ್ಲಿ ನಡೆದಿದೆ. ಚೂರಿ ಇರಿತ ಮತ್ತು ಗುಂಡಿನ ದಾಳಿಯಲ್ಲಿ ಕನಿಷ್ಠ 13 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಭಾನುವಾರ, ನೂರಾರು ಜನರು ಸಿರಾಕ್ಯೂಸ್‌ನ ಬೀದಿಯಲ್ಲಿ ಜಮಾಯಿಸಿದರು. ಆಗ ಏಕಾಏಕಿ ಕಾಲ್ತುಳಿತ ಉಂಟಾಗಿ ಜನರು ಇತ್ತಿಂದತ್ತ ಓಡಿದರು. ಜನಸಂದಣಿಯಲ್ಲಿದ್ದ ಹಲವಾರು ಜನರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಯಿತು ಮತ್ತು ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಬಳಿಕ ಕೆಲವರು ಗಾಯಗೊಂಡರು.
ಈ ಅಪಘಾತದಲ್ಲಿ ಗಾಯಗೊಂಡವರೆಲ್ಲರೂ 17 ರಿಂದ 25 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು ಹಲವರು ಮಹಿಳೆಯರು ಮತ್ತು ಪುರುಷರು ಗಾಯಗೊಂಡಿದ್ದಾರೆ. 24 ವರ್ಷದ ಮಹಿಳೆಯೊಬ್ಬರು ವಾಹನ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ. ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.