October 14, 2026
Wednesday, October 14, 2026
spot_img

ಮೈಸೂರು ದಸರಾಗೆ ಗೋಲ್ಡ್‌ ಕಾರ್ಡ್‌ ಖರೀದಿ ಮಾಡ್ಬೇಕಾ? ಇಂದಿನಿಂದಲೇ ಮಾರಾಟ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ನೂತನ ಅಪ್ಡೇಟ್‌ ಸಿಕ್ಕಿದ್ದು, ಗೋಲ್ಡ್‌ ಕಾರ್ಡ್‌, ಜಂಬೂಸವಾರಿ, ಪಂಜಿನ ಕವಾಯತು ಹಾಗೂ ಡ್ರೋನ್‌ ಶೋ ಸೇರಿದಂತೆ ಇತರ ಪ್ರಮುಖ ಕಾರ್ಯಕ್ರಮಗಳಿಗೆ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ.

ಈ ಬಾರಿ ದಸರಾ ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿದ್ದು, ವಿಜಯದಶಮಿಯ ಜಂಬೂಸವಾರಿ ಅಕ್ಟೋಬರ್ 21ರಂದು ನಡೆಯಲಿದೆ. ದಸರಾ ಅಧಿಕೃತ ವೆಬ್‌ಸೈಟ್‌ ಪ್ರಕಾರ ಟಿಕೆಟ್ ಬುಕ್ಕಿಂಗ್ ಅಧಿಕೃತ ಟಿಕೆಟ್ ಪಾಲುದಾರ TicketGenie ಮೂಲಕ ನಡೆಯುತ್ತಿದೆ.

ಗೋಲ್ಡ್‌ ಕಾರ್ಡ್‌ ದರ ಎಷ್ಟು?

ದಸರಾ ಗೋಲ್ಡ್‌ ಕಾರ್ಡ್‌ ಖರೀದಿ ದರ 6,500 ರೂಪಾಯಿಯಿಂದ ಆರಂಭವಾಗುತ್ತದೆ. ಇದರಲ್ಲಿ ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ ಪ್ರವೇಶ, ಜಂಬೂಸವಾರಿ, ಡ್ರೋನ್‌ ಶೋ ಹಾಗೂ ಪಂಜಿನ ಕವಾಯತು ನೋಡಲು ಅವಕಾಶ ಇರುತ್ತದೆ. ಗೋಲ್ಡ್‌ ಕಾರ್ಡ್‌ ಪಡೆದ ಜನ ಪ್ರತ್ಯೇಕವಾಗಿ ಎಲ್ಲೂ ಟಿಕೆಟ್‌ ಪಡೆಯಲು ಕ್ಯೂ ನಿಲ್ಲುವ ಅವಶ್ಯಕತೆ ಇರೋದಿಲ್ಲ. ಒಂದು ಬಾರಿ ಗೋಲ್ಡ್‌ ಕಾರ್ಡ್‌ ಖರೀದಿ ಮಾಡಿದರೆ ಎಲ್ಲ ಕಾರ್ಯಕ್ರಮಗಳನ್ನು ಸುಲಭವಾಗಿ ನೋಡಬಹುದಾಗಿದೆ.

ಜಂಬೂಸವಾರಿ ಸ್ಪೆಷಲ್‌, ಪಂಜಿನ ಕವಾಯತು ಮ್ಯಾಜಿಕ್‌

ಈ ಬಾರಿ ಜಂಬೂಸವಾರಿ ಪ್ರತೀ ವರ್ಷದಂತೆ ಸ್ಪೆಷಲ್‌ ಆಗಿದ್ದು,ಇದನ್ನು ನೋಡೋದಕ್ಕೆ 3,500ರೂಪಾಯಿ ನೀಡಿ ಟಿಕೆಟ್‌ ಖರೀದಿ ಮಾಡಬೇಕಿದೆ. ಹೀಗೆ ಮಾಡಿದಲ್ಲಿ ಅರಮನೆ ಮುಂಭಾಗದ ನಿಗದಿ ಗ್ಯಾಲರಿಯ ಎನ್‌ಕ್ಲೋಸರ್‌ನಲ್ಲಿ ಕುಳಿತುಕೊಂಡು ಜಂಬೂಸವಾರಿಯನ್ನು ನೋಡಬಹುದಾಗಿದೆ. ಇನ್ನು ಬನ್ನಿ ಮಂಟಪದಲ್ಲಿ ನಡೆಯುವ ಪ್ರಸಿದ್ಧ ಪಂಜಿನ ಕವಾಯತು ವೀಕ್ಷಣೆಯ ಟಿಕೆಟ್‌ 1,500 ರೂಪಾಯಿಯಿಂದ ಲಭ್ಯವಿದೆ. ಬನ್ನಿ ಮಂಟಪದ ಗ್ಯಾಲರಿಯ ಸೀಟ್‌ ಪಡೆದುಕೊಂಡವರಿಗೆ ಜಂಬೂಸವಾರಿ ಎಂಟ್ರಿ ಹಾಗೂ ಪಂಜಿನ ಕವಾಯತು ನೋಡಲು ಅವಕಾಶ ಇರಲಿದೆ.

ಡ್ರೋನ್‌ ಶೋಗೆ ದರ ಎಷ್ಟು?

ದಸರಾ ಕಾರ್ಯಕ್ರಮದ ಮತ್ತೊಂದು ಕಲರ್‌ಫುಲ್‌ ಆಕರ್ಷಣೆಯಾಗಿರುವ ಡ್ರೋನ್‌ ಶೋ ನೋಡೋದಕ್ಕೆ ಒಂದು ಸಾವಿರ ರೂಪಾಯಿ ಹಣ ನೀಡಿ ಟಿಕೆಟ್‌ ಪಡೆಯಬೇಕಾಗುತ್ತದೆ. ಅಧಿಕೃತ ಕಾರ್ಯಕ್ರಮ ಪಟ್ಟಿಯಲ್ಲಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅಕ್ಟೋಬರ್ 17, 18, 20 ಮತ್ತು 21ರಂದು ರಾತ್ರಿ 8ಕ್ಕೆ ಡ್ರೋನ್ ಶೋ ನಡೆಯಲಿದೆ ಎಂದು ನಮೂದಿಸಲಾಗಿದೆ.

ಯಾವುದು ಫ್ರೀ?

ಜಂಬೂಸವಾರಿಯ ಮೆರವಣಿಗೆ ಮಾರ್ಗ, ಅರಮನೆ ಲೈಟಿಂಗ್‌, ಸಾಂಸ್ಕೃತಿಕ ಕಾರ್ಯಕ್ರಮಗಳು, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಬನ್ನಿಮಂಟಪದಿಂದ ಪಂಜಿನ ಕವಾಯತನ್ನು ವೀಕ್ಷಿಸುವುದು ಉಚಿತವಾಗಿದೆ.

Must Read