July 13, 2026
Monday, July 13, 2026
spot_img

ಸರಣಿ ಸೋಲಿನ ಬೆನ್ನಲ್ಲೇ ಒಗ್ಗಟ್ಟಿನ ಮಂತ್ರ ಜಪಿಸಿದ ಶ್ರೇಯಸ್: ಟೀಮ್ ಇಂಡಿಯಾದ ಮುಂದಿನ ಗುರಿ ಚೇಂಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ವಿರುದ್ಧದ ಚುಟುಕು ಸರಣಿಯಲ್ಲಿ 4-0 ಅಂತರದ ಹೀನಾಯ ಸೋಲು ಕಂಡ ಬೆನ್ನಲ್ಲೇ, ಭಾರತ ತಂಡ ಇದೀಗ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಇದರ ನಡುವೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿ20 ನಾಯಕ ಶ್ರೇಯಸ್ ಅಯ್ಯರ್, ತಂಡದ ಭವಿಷ್ಯ ಹಾಗೂ ಆಟಗಾರರ ಮನೋಭಾವದ ಕುರಿತು ಮಹತ್ವದ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

ಯುವ ಪಡೆಗೆ ನಾಯಕನ ಬೆಂಬಲ

ಹಿರಿಯ ಆಟಗಾರರ ಗೈರುಹಾಜರಿಯಲ್ಲಿ ತಂಡ ಮುನ್ನಡೆಸಿದ್ದ ಅಯ್ಯರ್, ಈ ವಿದೇಶಿ ಪ್ರವಾಸವನ್ನು ಅತ್ಯುತ್ತಮ ಕಲಿಕಾ ಹಂತ ಎಂದು ಬಣ್ಣಿಸಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗಳಲ್ಲಿನ ಹಿನ್ನಡೆಯ ಹೊರತಾಗಿಯೂ, ತಂಡದ ಪ್ರತಿಯೊಬ್ಬ ಆಟಗಾರನ ಸಾಮರ್ಥ್ಯವನ್ನು ವೃದ್ಧಿಸಲು ತಾವು ಸಕಾರಾತ್ಮಕವಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ.

2028ರ ಟಿ20 ವಿಶ್ವಕಪ್ ಗುರಿ

ಮುಂದಿನ ಪ್ರಮುಖ ಟೂರ್ನಿಗಳತ್ತ ಗಮನ ಹರಿಸಿರುವ ಅವರು, “ನಾವು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2028ರ ಟಿ20 ವಿಶ್ವಕಪ್‌ಗಾಗಿ ಸಿದ್ಧರಾಗಬೇಕಿದೆ. ಅದಕ್ಕೂ ಮುನ್ನ ಕಠಿಣ ವಿದೇಶಿ ಪರಿಸ್ಥಿತಿ ಹಾಗೂ ಬೌನ್ಸಿ ಪಿಚ್‌ಗಳಿಗೆ ಹೊಂದಿಕೊಳ್ಳಲು ತಂಡದಲ್ಲಿ ಒಗ್ಗಟ್ಟು ಮತ್ತು ಮಾನಸಿಕ ಸ್ಥಿರತೆ ಅಗತ್ಯ” ಎಂದು ಪ್ರತಿಪಾದಿಸಿದರು.

ಸೋಲಿಗೆ ಯಾರೂ ಹೊಣೆಯಲ್ಲ

ಸಾಮಾಜಿಕ ಜಾಲತಾಣಗಳ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಕ್ಯಾಪ್ಟನ್, ಇದು ತಂಡದ ಬದಲಾವಣೆಯ ಪರ್ವ ಎಂದಿದ್ದಾರೆ. “ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂದು ಗೊತ್ತು. ಆದರೆ ಸೋಲಿಗೆ ನಾನು ಯಾರನ್ನೂ ವೈಯಕ್ತಿಕವಾಗಿ ಹೊಣೆ ಮಾಡಲ್ಲ. ನಾವೆಲ್ಲರೂ ಒಟ್ಟಾಗಿ ಸೋತಿದ್ದೇವೆ ಮತ್ತು ಒಟ್ಟಾಗಿಯೇ ಬಲಿಷ್ಠವಾಗಿ ಪುನರಾಗಮನ ಮಾಡುತ್ತೇವೆ” ಎಂದು ಧೈರ್ಯ ತುಂಬಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !