ಹೊಸದಿಗಂತ ವರದಿ, ಬೆಂಗಳೂರು:
ಶ್ರೀ ಅಚ್ಚುತಪ್ರಜ್ಞ, ಜಗದ್ಗುರು ಶ್ರೀ ಪೂರ್ಣಪಜ್ಞ, ಸತ್ಯ ತೀರ್ಥ ಮಹಾಸಂಸ್ಥಾನ ಶ್ರೀ ಭಂಡಾರ ಕೇರಿ ಮಠ, ಭಾಗವತಾಶ್ರಮ ಪ್ರತಿಷ್ಠಾನ ಹಾಗೂ ಲೋಕ ಸಂಸ್ಕೃತಿ ಕಲಾ ವಿದ್ಯಾ ವಿಕಾಸ ಪ್ರತಿಷ್ಠಾನಗಳು ಸಂಯುಕ್ತವಾಗಿ ಬೆಂಗಳೂರಿನ ಗಿರಿನಗರದಲ್ಲಿರುವ ಭಾಗವತ ಕೀರ್ತಿಧಾಮದಲ್ಲಿ ಶ್ರೀ ವಿದ್ಯೇಶ ತೀರ್ಥರ 70 ನೇ ವರ್ಧಂತಿ ಉತ್ಸವವನ್ನು ಮೂರು ದಿನಗಳ ಕಾಲ ನಡೆಯಲಿದೆ.
‘ಶ್ರೀ ವಿದ್ಯೇಶ ಸಪ್ತತಿ ವಿಚಾರ ವಿನೋದ ಉತ್ಸವ’ ಶೀರ್ಷಿಕೆಯಡಿಯಲ್ಲಿ ಜೂನ್ 13 ರಿಂದ 15 ರವರೆಗೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ 70 ಜನ ಸಾರಂಗ ವಿದ್ವಾಂಸರಿಂದ ಚುಟುಕು ವೈವಿಧ್ಯ ಭರಿತ ಚೇತೋಹಾರಿ ವಿಚಾರ ಮಂಡನೆ ನಡೆಯಲಿದೆ.
ಜೂನ್ 13ರ ಸಂಜೆ ಐದರಿಂದ ಆರಂಭವಾಗೊಂಡ ಈ ಕಾರ್ಯಕ್ರಮದಲ್ಲಿ ಮಹಾಭಾರತದ 18 ಪರ್ವಗಳು, ಭಾಗವತ ದ್ವಾದಶ ಸ್ಕಂದಗಳು ಮತ್ತು ಆರು ಉಪನಿಷತ್ತುಗಳ ಕುರಿತು 70 ಜನ ವಿದ್ವಾಂಸರಿಂದ ವಿಚಾರ ವಿಮರ್ಶೆ ಮತ್ತು ವಿಚಾರ ಮಂಡನೆ ನಡೆಯಲಿದೆ.
ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠ, ಶ್ರೀ ಪೂರ್ಣ ಪ್ರಜ್ಞ ವಿದ್ಯಾಪೀಠ, ಮೈಸೂರಿನ ವ್ಯಾಸ ತೀರ್ಥ ವಿದ್ಯಾಪೀಠವೂ ಸೇರಿದಂತೆ ಮಂತ್ರಾಲಯ , ಸೋದೆ, ಪಲಿಮಾರು , ತಿರುಪತಿ, ಪುತ್ತಿಗೆ ಮತ್ತಿತರ ಮಹಾ ಸಂಸ್ಥಾನಗಳ ಗುರುಕುಲ ಮತ್ತು ವಿದ್ಯಾಪೀಠದ ವಿದ್ವಾಂಸರು ಭಾಗವಹಿಸಿ ತಮ್ಮ ಪಾಂಡಿತ್ಯವನ್ನು ಅನಾವರಣಗೊಳಿಸಲಿದ್ದಾರೆ .
ಜೂನ್ 15 ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಗ್ರಂಥ ಲೋಕಾರ್ಪಣೆ ಹಾಗೂ 70 ಜನ ವಿದ್ವತ್ ಸಾರಂಗರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಭೀಮನ ಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀಮಠದ ಅಂಗಸಂಸ್ಥೆಯಾದ ಐತರೇಯ ಶೋಧ ಪ್ರಕಾಶನದ ವತಿಯಿಂದ ಪ್ರಣತಿ ದರ್ಪಣ ಎಂಬ ಗ್ರಂಥ (ಸಂಗ್ರಹ , ಅನುವಾದ- ಪಂಡಿತ ರಘೋತ್ತಮ ನಾಗಸಂಪಿಗೆ.ಪರಿಶೋಧನೆ ಹಾಗೂ ಪರಿಷ್ಕರಣೆ ಡಾ. ಎಚ್. ಸತ್ಯನಾರಾಯಣ ಆಚಾರ್ಯ) ಮತ್ತು ‘ವಿದ್ಯೇಶ ವಿಚಾರ ಸಪ್ತತಿ’ ಯ (ವಿವಿಧೆಡೆವ ಶ್ರೀ ಭಂಡಾರ ಕೇರಿ ಗುರುಗಳು ಮಾಡಿದ ಉಪನ್ಯಾಸ, ಪ್ರವಚನ ಮತ್ತು ಅಮೃತೋಪದೇಶಗಳ ಸಾರ ಸಂಗ್ರಹ- ಉಡುಪಿಯ ಪಂಡಿತ ಸಗ್ರಿ ರಾಘವೇಂದ್ರ ಉಪಾಧ್ಯಾಯರಿಂದ ಸಂಪಾದಿತ ಕೃತಿ) ಲೋಕಾರ್ಪಣೆ ನಡೆಯಲಿದೆ.
ಹಿರಿಯ ಪಂಡಿತರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ ಮತ್ತು ಪೇಜಾವರ ವಿದ್ಯಾ ಪೀಠದ ಪ್ರಾಚಾರ್ಯ ಸತ್ಯನಾರಾಯಣ ಅವರು ಈ ಸಂದರ್ಭ ಮಾತನಾಡಲಿದ್ದಾರೆ .
70ನೇ ವರ್ಧಂತಿ ಮಹೋತ್ಸವದ ಅಂಗವಾಗಿ 70 ಜನ ವಿದ್ವಾಂಸರಿಗೆ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅವರು 70 ಜನ ಪಂಡಿತರಿಗೆ ರಜತ ಪಾತ್ರಾ ಸಹಿತ ಸನ್ಮಾನ ಮಾಡಲಿದ್ದಾರೆ.
ಈ ಸಂದರ್ಭ ಬೆಂಗಳೂರಿನ ಮಾಗಡಿ ಸಮೀಪದ ಅಡಕಮಾರನಹಳ್ಳಿಯಲ್ಲಿರುವ ಆನಂದವನ ಗುರುಕುಲಕ್ಕೆ ಭಂಡಾರ ಕೇರಿ ಮಠದ ವತಿಯಿಂದ 5 ಲಕ್ಷ ರೂಪಾಯಿ ವಿಶೇಷ ಅನುದಾನ ಪೂರ್ವಕ ಅನುಗ್ರಹ ನಿಧಿ ಸಮರ್ಪಣೆ ಆಗಲಿದೆ.