ಹೊಸದಿಗಂತ ಡಿಜಿಟಲ್ ಡೆಸ್ಕ್;
ಅಸ್ವಸ್ಥ ಸ್ಥಿತಿಯಲ್ಲಿ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನ್ನಾರು ಪರಿಸರದ ಚಾರ್ಮಾಡಿ-ಕನಪಾಡಿ ರಕ್ಷಿತಾರಣ್ಯದಲ್ಲಿ ಕಂಡು ಬಂದಿದ್ದ ಹೆಣ್ಣಾನೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ತಡರಾತ್ರಿ ಮೃತಪಟ್ಟಿದೆ.
ಸುಮಾರು 25ರಿಂದ 30 ವರ್ಷ ಪ್ರಾಯದ ಈ ಕಾಡಾನೆ ಕಳೆದ ಎರಡು ದಿನಗಳಿಂದ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಮಂಗಳೂರಿನಿಂದ ತಜ್ಞ ಪಶು ವೈದ್ಯರಾದ ಡಾ.ಯಶಸ್ವಿ ಹಾಗೂ ತಂಡದವರನ್ನು ಕರೆಯಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಕಾಡಾನೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿತು.
ಶುಕ್ರವಾರ ಬೆಳಿಗ್ಗೆ ಅರಣ್ಯ ಇಲಾಖೆ ವತಿಯಿಂದ ಆನೆಯ ಮೃತದೇಹದ ಪೋಸ್ಟ್ ಮಾರ್ಟಂ ನಡೆಯಿತು. ಬಳಿಕ ಜೆಸಿಬಿ ಮೂಲಕ ಗುಂಡಿ ತೋಡಿ ಅದೇ ಸ್ಥಳದಲ್ಲಿ ಆನೆಯನ್ನು ದಫನ ಮಾಡಲಾಯಿತು.
24 ಸೆಂಮೀ ಹಾಗು 30 ಸೆಂಮೀ ಅಳತೆಯ ಎರಡು ದಂತಗಳನ್ನು ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆಯಿತು.
ಆನೆಯ ದೇಹದ ಹೊರಗಡೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಲಿವರ್ ಸಹಿತ ಬಹು ಅಂಗಾಂಗ ವೈಫಲ್ಯದಿಂದ ಆನೆ ಮೃತಪಟ್ಟಿರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಆಹಾರ ಸೇವನೆಗೆ ತೊಂದರೆ ಅನುಭವಿಸುತ್ತಿದ್ದು ಪೂರ್ಣ ನಿತ್ರಾಣ ಸ್ಥಿತಿಗೆ ತಲುಪಿತ್ತು.
ಗುರುವಾರ ಇಲಾಖೆ ಆನೆಗೆ ನಾನಾ ಬಗೆಯ ತರಕಾರಿ,ಹಣ್ಣು ಹಂಪಲು ನೀಡಲಾಗಿದ್ದರೂ ಅದನ್ನು ತಿಂದಿರಲಿಲ್ಲ. 30 ಬಾಟ್ಲಿ ಡ್ರಿಪ್ಸ್ ಕೂಡ ನೀಡಲಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಒಮ್ಮೆ ಎದ್ದು ನಿಂತಿದ್ದ ಆನೆ ಬಳಿಕ ಮತ್ತೆ ಕುಸಿದು ಬಿದ್ದಿತ್ತು.
ಡಿಸಿಎಫ್ ಆಂಟನಿ ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ, ಎಸಿಎಫ್ ಕ್ಲಿಫರ್ಡ್ ಲೋಬೋ ಅವರ ನಿರ್ದೇಶನದಂತೆ ಬೆಳ್ತಂಗಡಿ ಆರ್ ಎಫ್ ಒ ತ್ಯಾಗರಾಜ್ ನೇತೃತ್ವದಲ್ಲಿ ನಡೆದ ಪೋಸ್ಟ್ ಮಾರ್ಟಂ ಕಾರ್ಯಾಚರಣೆಯಲ್ಲಿ ಡಿಆರ್ ಎಫ್ ಒ ಗಳಾದ ನಾಗೇಶ್, ರವಿಚಂದ್ರ, ರವೀಂದ್ರ,ಗಸ್ತು ಅರಣ್ಯ ಪಾಲಕರಾದ ಪರಶುರಾಮ ಮೇಟಿ, ರವಿ ಜಟ್ಟಿ ಮುಕ್ರಿ, ಕಿಟ್ಟಣ್ಣ, ಮನೋಹರ್, ದಿವಾಕರ್,ಕುಶಾಲಪ್ಪ, ಬೆಳ್ತಂಗಡಿ ಪಶು ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಅಧಿಕಾರಿ (ಆ) ಡಾ.ರವಿಕುಮಾರ್, ಹಿರಿಯ ಪಶುವೈದ್ಯಾಧಿಕಾರಿ ಡಾ.ಯತೀಶ್ ಕುಮಾರ್ ಸ್ಥಳೀಯರಾದ ಸಚಿನ್ ಭಿಡೆ,ಅನಿಲ್ ಕಕ್ಕಿಂಜೆ, ಜನಾರ್ದನ,ಕೃಷ್ಣಪ್ಪ ಮತ್ತಿತರರು ಸಹಕರಿಸಿದರು.