ಕಾಯಕ ಸಮಾಜಗಳಿಗೆ ಚೊಂಬು ನೀಡಿದ ಸಿದ್ದರಾಮಯ್ಯ ಸರ್ಕಾರ: ಆರ್. ರಘು ಕೌಟಿಲ್ಯ

ಹೊಸದಿಗಂತ ವರದಿ,ಮೈಸೂರು:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾಯಕ ಸಮಾಜಗಳಿಗೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡದೆ ಚೊಂಬು ನೀಡಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಆರ್.ರಘುಕೌಟಿಲ್ಯ ಲೇವಡಿ ಮಾಡಿದರು.

ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ವರ್ಗಗಳ ಚಾಂಪಿಯನ್ ಎಂದು ಕರೆಯಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಮುಖ್ಯಮಂತ್ರಿಯಾಗಿ ೧೦ ತಿಂಗಳಾದರೂ ಇಲ್ಲಿಯ ತನಕ ಒಂದು ರೂಪಾಯಿ ಕೂಡ ಕಾಯಕ ಸಮಾಜಗಳ ಅಭಿವೃದ್ಧಿಗೆಂದು ಇರುವ ಯಾವುದೇ ನಿಗಮ,ಮಂಡಳಿಗೆ ಅನುದಾನವೆಂದು ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಕಾಯಕ ಸಮಾಜಗಳು ಈ ನಿಗಮ,ಮಂಡಳಿಗಳಿoದ ಸಾಲಸೌಲಭ್ಯ, ವಿದ್ಯಾಭ್ಯಾಸ, ವೃತ್ತಿಗೆ ನೆರವು ಮುಂತಾದವುಗಳ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಹಿಂದುಳಿದ ವರ್ಗಗಳ ಅಭಿವೃದ್ಧಿಗೆಂದು ಬಿಜೆಪಿ ಸರ್ಕಾರ ೫೦೦ ಕೋಟಿರೂಗಳನ್ನು ಬಿಡುಗಡೆ ಮಾಡಿತ್ತು. ಆದರೆ ಹಿಂದುಳಿದ ವರ್ಗಗಳ ಚಾಂಪಿಯನ್ ಎಂದೆನಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಈ ವರ್ಗಗಳ ಅಭಿವೃದ್ಧಿಗೆಂದು ಕನಿಷ್ಠ ೧ ಸಾವಿರ ಕೋಟಿರೂಗಳನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಈ ವರ್ಗಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನೂ ಕೂಡ ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿ, ಹಿಂದುಳಿದ ವರ್ಗಗಳಿಗೆ ಚೊಂಬು ನೀಡಿದ್ದಾರೆ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಶ್ರಮಿಕ ವರ್ಗಗಳ ಅಭಿವೃದ್ಧಿಯನ್ನು ಕೇಂದ್ರೀಕರಿಸಿಕೊoಡಿದೆ. ಯೋಜನೆಗಳ ಸೌಲಭ್ಯಗಳನ್ನು ಶ್ರಮಿಕ ವರ್ಗಗಳು ನೇರವಾಗಿ ಪಡೆಯುತ್ತಿವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾತ್ರೆಯಲ್ಲಿ ಸಿಗುವ ಊಟದಂತಿದೆ ಎಂದು ಟೀಕಿಸಿದರು.
ಶೋಷಿತ ಸಮಾಜಗಳಿಗೆ ಲಕ್ಷಾಂತರ ಎಕರೆ ಭೂಮಿಗಳನ್ನು ನೀಡಿದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಪ್ರತಿಮೆಯನ್ನು ಸಿಎಂ ಸಿದ್ದರಾಮಯ್ಯ ತಮ್ಮ ತವರು ಜಿಲ್ಲಾ ಕೇಂದ್ರದಲ್ಲಿಯೇ ಸ್ಥಾಪಿಸಲಿಲ್ಲ. ಆದರೆ ನಮ್ಮ ಬಿಜೆಪಿ ಸರ್ಕಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಮೆ ಸ್ಥಾಪನೆಗೆ ಹಣ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿ:ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದೆ. ಕೊಲೆ, ಸುಲಿಗೆ, ಬಾಂಬ್ ಬ್ಲಾಸ್ಟ್, ಅತ್ಯಾಚಾರದಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ನಗರಪಾಲಿಕೆಯ ಸದಸ್ಯರ ಮಗಳನ್ನೇ ಕೊಲೆ ಮಾಡಲಾಗಿದೆ. ಗೂಂಡಾಗಳು, ಭಯೋತ್ಪಾಧಕರ ಕೈಗೆ ಸರ್ಕಾರವನ್ನು ನೀಡಲಾಗಿದೆ. ಕೂಡಲೇ ರಾಜ್ಯಪಾಲರು ಈ ಬಗ್ಗೆ ಕ್ರಮ ಕೈಗೊಂಡು, ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು. ಈ ಬಗ್ಗೆ ರಾಷ್ಟçಪತಿಗಳಿಗೆ ವರದಿಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಭಾನುವಾರ ಮೈಸೂರಿನಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜನೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕಾಯಕ ಸಮಾಜಗಳು ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದು, ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಯದುವೀರ್, ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಎಸ್.ಬಾಲರಾಜ್ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಯಕ ಸಮಾಜಗಳ ಮುಖಂಡರುಗಳಾದ ಬಾಬು ಪತ್ತಾರ್, ಚನ್ನಕೇಶವ, ಚಲುವ, ರಂಗಪ್ಪಚಾರ್, ರಶ್ಮಿ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!