ಹೊಸದಿಗಂತ ವರದಿ, ದಾವಣಗೆರೆ:
ಮುಖ್ಯಮಂತ್ರಿ ವಿರುದ್ಧ ವೃಥಾ ಆರೋಪ ಮಾಡಿಕೊಂಡು ರಾಜ್ಯದ ಜನರಿಗೆ ತಪ್ಪು ಸಂದೇಶ ಕೊಡುವ ಉದ್ದೇಶದಿಂದ ಬಿಜೆಪಿಯವರು ಪಾದಯಾತ್ರೆ ನಡೆಸಲು ಹೊರಟಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಟೀಕಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ನಡೆಸಿದ ಪಾದಯಾತ್ರೆಯಲ್ಲಿ ನಿಜಾಂಶವಿತ್ತು. ರಾಜ್ಯದ ಸಂಪತ್ತು ಉಳಿಸುವ ಸದುದ್ದೇಶದಿಂದ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಲಾಗಿತ್ತು. ಆದರೆ, ಈಗ ಬಿಜೆಪಿಯವರು ಸಿಎಂ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪ ಮಾಡಿ, ಪಾದಯಾತ್ರೆ ನಡೆಸಲು ಹೊರಟಿದ್ದಾರೆ. ಯಾವುದೇ ಕಾನೂನು ಉಲ್ಲಂಘನೆಯಾಗದಿರುವ ಪ್ರಕರಣದಲ್ಲಿ ಜನರಿಗೆ ಪಾದಯಾತ್ರೆ ಮಾಡುವ ಮೂಲಕ ತಪ್ಪು ಮಾಹಿತಿ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ತಪ್ಪಿಲ್ಲದ ಕಾರಣಕ್ಕಾಗಿಯೇ ವಾಲ್ಮೀಕಿ ನಿಗಮದ ಹಗರಣ ಮತ್ತು ಮೂಡ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಲು ಸಿಎಂ ಸಿದ್ದರಾಮಯ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ವರದಿ ಬಂದ ನಂತರ ಜನರಿಗೆ ಸತ್ಯ ತಿಳಿಯಲಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಬಿಜೆಪಿಯವರು ಪಾದಯಾತ್ರೆ ಮಾಡುವುದಾದರೆ ಮಾಡಲಿ. ನಾವು ರಾಜ್ಯದ ಜನರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಾದಯಾತ್ರೆ ನಡುವಿನ ವ್ಯತ್ಯಾಸ ತಿಳಿಸುತ್ತೇವೆ. ಸಿದ್ದರಾಮಯ್ಯನವರು ಯಾವುದೇ ತಪ್ಪು ಮಾಡಿಲ್ಲ, ಕಾನೂನುಬಾಹಿರವಾಗಿ ಯಾವುದೂ ನಡೆದಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡುತ್ತೇವೆ ಎಂದು ಅವರು ಸಮರ್ಥಿಸಿಕೊಂಡರು.
ನ್ಯಾಯ ಸಿಗದಿದ್ದರೆ ಭಯೋತ್ಪಾದಕ ಆಗುವುದಾಗಿ ಪೃಥ್ವಿ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಯಾವುದೇ ಪೊಲೀಸ್ ಠಾಣೆಯಲ್ಲಿ ಪೊಲೀಸರದ್ದೇ ತಪ್ಪಿದ್ದರೆ ಇಲಾಖೆಯಿಂದ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ, ರಾಜಸ್ಥಾನದಿಂದ ಪ್ರತಿವಾರ ಅಥವಾ 15 ದಿನಗಳಿಗೊಮ್ಮೆ ಮಾಂಸ ತಂದು ಮಾರಾಟ ಮಾಡುವುದನ್ನೇ ಕೆಲವರು ಅನಾವಶ್ಯಕವಾಗಿ ನಾಯಿ ಮಾಂಸ ಎಂಬುದಾಗಿ ಆರೋಪಿಸಿದ್ದರು. ಇದೀಗ ಪ್ರಯೋಗಾಲಯ ನೀಡಿದ ವರದಿಯನ್ವಯ ಅದು ಮೇಕೆ ಮಾಂಸ ಎಂಬುದು ಬಹಿರಂಗಗೊಂಡಿದೆ. ಆದ್ದರಿಂದ ದುರುದ್ದೇಶ ಇಟ್ಟುಕೊಂಡು ಯಾರ ಮೇಲೂ ಈ ರೀತಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗೆ ಸರ್ಕಾರ ಅನುದಾನ ವಾಪಸ್ ಪಡೆದಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಬಜೆಟ್ ನಲ್ಲಿ ಯಾವುದೇ ಇಲಾಖೆಗೆ ನೀಡಿದ ಅನುದಾನವನ್ನು ಸ್ಥಗಿತಗೊಳಿಸಲು ಆಗುವುದಿಲ್ಲ. ಸ್ವಲ್ಪ ತಡವಾಗಿಯಾದರೂ ಅದನ್ನು ಇಲಾಖೆಗೆ ಸರ್ಕಾರ ಮಂಜೂರು ಮಾಡಲಿದೆ ಎಂದರು.