ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಸೈಟ್ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿವೆ. ಆದರೆ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ 5 ವರ್ಷಗಳ ಕಾಲ ಮುಂದುವರಿಯಲಿದ್ದಾರೆ. ಅವರ ವಿರುದ್ಧ ಕೋರ್ಟ್‍ನಲ್ಲಿ ಆದೇಶ ಬಂದಾಗಿನಿಂದ ರಾಜ್ಯದಲ್ಲಿ ಸಾಕಷ್ಟು ಅನಾವಶ್ಯಕ ಚರ್ಚೆ ನಡೆಯುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಅವರು ತುರ್ತು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನನ್ನ ಮತ್ತು ಸಿದ್ದರಾಮಯ್ಯ ನಡುವೆ 40 ವರ್ಷಗಳ ಅನುಬಂಧವಿದೆ. ಸಿದ್ದರಾಮಯ್ಯ ಅವರಾಗಲಿ, ಅವರ ಪತ್ನಿಯಾಗಲಿ ಮುಡಾ ಸೈಟ್ ಕೇಳಿಲ್ಲ. ಈಗ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಇಷ್ಟು ವರ್ಷಗಳಿಂದ ಇಲ್ಲದ ಆರೋಪಗಳು ಈಗ ಯಾಕೆ? ಸಿದ್ದರಾಮಯ್ಯ ಮತ್ತು ಅವರ ಪತ್ನಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಅವರು ಸಿಎಂ ಆಗಿರುವುದನ್ನು ಸಹಿಸೋದಕ್ಕೆ ಆಗದೇ ಇರುವವರು ಮಾಡಿದ ಕುತಂತ್ರ ಎಂದು ಆರೋಪಿಸಿದ್ದಾರೆ.