ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ಐದು ವರ್ಷ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಇದನ್ನ ನಿರ್ಧರಿಸೋದು ಹೈಕಮಾಂಡ್ ಹಾಗಾಗಿ ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳಿಂದ ಇದೇ ಪ್ರಶ್ನೆ ಕೇಳುತ್ತಿದ್ದೀರಿ, ಕೈಮುಗಿದು ಕೇಳುತ್ತೇನೆ ಇದನ್ನ ಇಲ್ಲಿಗೆ ಕೈಬಿಡಿ. ಸಿಎಂ ಮಾಡುವ ಬಗ್ಗೆ ಹೈಕಮಾಂಡ್ ಮತ್ತು ಎಂಎಲ್‌ಎ ಗಳು ನಿರ್ಧರಿಸುತ್ತಾರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ನಾನೇ ಐದು ವರ್ಷವೂ ಸಿಎಂ ಆಗಿ ಮುಂದುವರೆಯುತ್ತೇನೆ ಎಂದಿದ್ದಾರೆ ಆದರೆ ಹೈಕಮಾಂಡ್ ಯಾವುದೇ ಹಂತದಲ್ಲಿ ಯಾವುದೇ ಬದಲಾವಣೆ ಬೇಕಾದರು ಮಾಡಬಹುದು ಎಂದು ತಿಳಿಸಿದರು.
ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ಅವರವರ ಅಭಿಪ್ರಾಯ ಹೇಳಿದ್ದಾರೆ. ಆದರೆ ಇದನ್ನೆ ಮುಂದಿಟ್ಟುಕೊಂಡು
ಬಿಜೆಪಿ ಅಪರೇಷನ್ ಕಮಲ ಮಾಡಲು ಹೊರಟಿದೆ. ED , CBI ಬಳಸಿ ಸರ್ಕಾರ ಕೆಡುವ ಹುನ್ನಾರ ನಡೆಯುತ್ತಿದೆ ಎಂದರು.
ವಸೂಲಿಗೆ ಹೈಕಮಾಂಡ್ ನಾಯಕರು ಬಂದಿದ್ದಾರೆ ಎಂಬ HDK ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು,
ಕುಮಾರಣ್ಣ ನಿತ್ಯವೂ ಮಾತಾಡ್ತಾರೆ, ಮೊದಲು ಬಿಜೆಪಿ ವಿರುದ್ದ ಮಾತನಾಡುತ್ತಿದ್ದರು. ಈಗ ಕಾಂಗ್ರೆಸ್ ವಿರುದ್ದ ಮಾತನಾಡುತ್ತಿದ್ದಾರೆ. ಅವರಿಗೆ ಹೇಗೆ ಬೇಕೋ ಹಾಗೆ ಮಾತನಾಡಲಿ ಎಂದು ಹೇಳಿದರು.
ನಾನೂ ಸಿಎಂ ಆಕಾಂಕ್ಷಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಅಭಿಪ್ರಾಯ ಹೇಳಿದ್ದಾರೆ. ಸಿಎಂ ಆಯ್ಕೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾನು ಆ ಸಿಎಂ ರೇಸ್ ನಲ್ಲಿ ಇಲ್ಲ. ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ, ಅದಕ್ಕೆ ನನ್ನ ಸಮ್ಮತಿ ಇದೆ ಎಂದರು.
ಇದೇ ವೇಳೆ ಕೇಂದ್ರಕ್ಕೆ ಬರ ಪರಿಹಾರ ನೆರವು ನೀಡಲು ಮನವಿ ಮಾಡಿದ್ದೇವೆ. ಬರ ಅಧ್ಯಯನ ಬಿಟ್ಟು ಹಣ ನೀಡಬೇಕು. ಪುಕ್ಸಟ್ಟೆ ಬಾಷಣ ಬಿಟ್ಟು, ಪ್ರಧಾನಿ ಹಣ ಕೊಡಲಿ. ಪಬ್ಲಿಸಿಟಿ ಬಿಟ್ಟು ಮಿಡಿಯಾ ಮುಂದೆ ಒಂದು ಗಂಟೆ ಕುಳಿತು ಚರ್ಚೆ ಮಾಡಲಿ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.