ಸಿದ್ದರಾಮಯ್ಯಗೆ ನೀಡಿದ ಗ್ಯಾರಂಟಿ ಭರವಸೆ ಈಡೇರಿಸುವ ಆಸಕ್ತಿ ಇಲ್ಲ: ಜೋಶಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಗ್ಯಾರಂಟಿ ಭರವಸೆ ಈಡೇರಿಸುವ ಆಸಕ್ತಿ ಇಲ್ಲ. ಅವೆಲ್ಲವೂ ಚುನಾವಣೆಯಲ್ಲಿ ಗೆಲ್ಲಲು ನೀಡಿದ್ದಾರೆ ಅನಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಅನುದಾನ ಕಡಿಮೆ ಬಂದಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ ಎಂದರು.

2009 ರಿಂದ 2014 ರವರೆಗೆ ತೆರಿಗೆ ವಿಕೇಂದ್ರೀಕರಣ ಅನುದಾನ ಶೇ.148 ರಷ್ಟು ಜಾಸ್ತಿಯಾಗಿದೆ. 2014 ರಿಂದ 2019 ವರೆಗೆ 129 ಜಾಸ್ತಿಯಾಗಿದೆ. 700-800 ಕೋಟಿ ರಷ್ಟು ಬರುತಿದ್ದ ತೆರಿಗೆ ವಿಕೇಂದ್ರಿಕರಣ ಅನುದಾನ 5000-7000 ಕೋಟಿ ಬಂದಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಹೇಳಬೇಕಾದರೆ ತಿಳಿದುಕೊಳ್ಳಲಿ. 2009-10 ರಲ್ಲಿ 20476 ಕೋಟಿ ರೂಪಾಯಿ ನೀಡಿದ್ದರೆ. 2019 -20 ರಲ್ಲಿ 7578 ಕೋಟಿ ನೀಡಲಾಗಿದೆ. 2021-22 ರಲ್ಲಿ 7862 ಕೋಟಿ ಕೊಟ್ಟಿದ್ದೇವೆ. ಪ್ರತಿ ವರ್ಷ ಅನುದಾನ ರಾಜ್ಯಕ್ಕೆ ಹೆಚ್ಚು ನೀಡಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದರು.

ಕಾಂಗ್ರೆಸ್ ಮೊದಲ ಸಚಿವ ಸಂಪುಟದಲ್ಲಿ ಐದು ಭರವಸೆ ಈಡೇರಿಸುವುದಾಗಿ ಹೇಳಿದ್ದರು. ಆದರೆ ಈಗ ಹೇಳುತ್ತಿರುವುದು ತಾತ್ಕಾಲಿಕ ಎಂದು ಹೇಳುತ್ತಿದ್ದಾರೆ. ಇದೇನಾ ಜನರಿಗೆ ನೀಡಿದ ಭರವಸೆ ಎಂದು ಪ್ರಶ್ನಿಸಿದರು.

ಇನ್ನು ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣ ತನಿಖೆ ಮಾಡಿಸುತ್ತೇನೆ ಎನ್ನುತ್ತಿದ್ದು, ಮಾಡಿಸಲಿ ಯಾರು ಬೇಡಾ ಅಂದಿದ್ದಾರೆ. ನಮ್ಮ ಅವಧಿಯಲ್ಲಿ ನೀರಾವರಿ, ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಹಗರಣ ನಡೆದಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!