ಕಮ್ಯುನಿಸ್ಟರ ಚೀನಾ ಕಾರ್ಯಸೂಚಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ- ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಲೇ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕರ್ನಾಟಕದಲ್ಲಿನ ಭಾರತ ಚೀನಾ ಫ್ರೆಂಡ್ಶಿಪ್‌ ಅಸೋಸಿಯೇಷನ್‌ ಭಾನುವಾರದಂದು ಏರ್ಪಡಿಸಿರೋ ಚಿಂತನಾ ಕಾರ್ಯಕ್ರಮ ಇದೀಗ ಸಾಮಾಜಾಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಏಕೆಂದರೆ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಹಾಗೂ ಕರ್ನಾಟಕದ ಮಾಜಿಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಎಚ್.ಸಿ. ಮಹದೇವಪ್ಪ ಅವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿದೆ. ತೈವಾನ್‌ ಗೆ ಅಮೆರಿಕದ ನಾನ್ಸಿ ಪೆಲೋಸಿ ಭೇಟಿಯ ಹಿನ್ನೆಲೆಯಲ್ಲಿ ಚೀನಾದ ಆಂತರಿಕ ವಿಷಯಗಳಲ್ಲಿ ಅಮೆರಿಕದ ಹಸ್ತಕ್ಷೇಪವದ ಕುರಿತು ಈ ಕಾರ್ಯಕ್ರಮದಲ್ಲಿ ಚಿಂತನಾಕೂಟ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯ ಕಾಂಗ್ರೆಸ್‌ ನಾಯಕರು ಹಾಜರಾಗುತ್ತಿರುವುದರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಭಾರತದೊಂದಿಗೆ ಚೀನಾದ ತಿಕ್ಕಾಟ, ಗಡಿಯಲ್ಲಿ ಚೀನಾದ ಆಕ್ರಮಣಕಾರಿ ನೀತಿಯ ಕುರಿತು ಭಾರತ ಜಾಗತಿಕವಾಗಿ ಧ್ವನಿಯೆತ್ತಿ ವಿರೋಧಿಸುತ್ತಿದೆ, ಹಾಗೆಯೇ ಕ್ವಾಡ್‌ ನಂತಹ ಅಂತರಾಷ್ಟ್ರೀಯ ಸಮೂಹದ ಮೂಲಕ ಅಮೆರಿಕದೊಂದಿಗೆ ಭಾರತ ಉತ್ತಮ ಸಂಬಂಧಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕರ್ನಾಟಕದಲ್ಲಿ ಏರ್ಪಡಿಸಲ್ಪಟ್ಟಿರುವ ಈ ಚಿಂತನಾಕೂಟವು ಭಾರತದ ರಾಷ್ಟ್ರೀಯ ಕಾರ್ಯಸೂಚಿಯೊಂದಿಗೆ ತಾಳೆಯಾಗುವುದಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಮಾಜಿಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್ ನಾಯಕರು ಭಾಗವಹಿಸುವುದರ ಕುರಿತು ಟ್ವೀಟರ್‌ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಡೋಕ್ಲಂ ನಲ್ಲಿ ಭಾರತ ಚೀನಾದೊಂದಿಗೆ ಸೆಣಸುತ್ತಿರುವಾಗ ರಾಹುಲ್‌ ಗಾಂಧಿ ಚೀನಾದ ರಾಯಭಾರಿಯನ್ನು ಭೇಟಿ ಮಾಡಿದ್ದು ಹಾಗೂ ಕಾಂಗ್ರೆಸ್‌ ವತಿಯಿಂದಲೇ ಚೀನಾಕ್ಕೆ ಹೋಗಿದ್ದರು ಎಂಬುದಕ್ಕೂ ಇದಕ್ಕೂ ಸಂಬಂಧವಿದೆಯಾ ? ಎಂದು ಹಲವರು ಪ್ರಶ್ನೆ ಮಾಡಿದ್ದರು. ಚೀನಾದ ಕಮ್ಯುನಿಸ್ಟ್‌ ಪಾರ್ಟಿಯೊಂದಿಗೆ ಕಾಂಗ್ರೆಸ್‌ ಒಪ್ಪಂದ ಮಾಡಿಕೊಂಡಿದೆ ಎಂಬ ಸುದ್ದಿಗೂ ಪ್ರಸ್ತುತ ಸಿದ್ಧರಾಮಯ್ಯನವರು ಪಾಲ್ಗೊಳ್ಳುತ್ತಿರುವುದಕ್ಕೂ ಹಲವರು ತಾಳೆಮಾಡುವ ರೀತಿ ಟ್ವೀಟ್‌ ಮಾಡಿದ್ದರು.

ಈ ರೀತಿ ಟ್ವೀಟರ್‌ ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡವರಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಎಚ್.ಸಿ ಮಹದೇವಪ್ಪ ಇಬ್ಬರೂ ತಾವು ಭಾಗವಹಿಸುತ್ತಿಲ್ಲ ಎಂದು ಟ್ವೀಟರ್‌ ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೇ ಸೈದ್ಧಾಂತಿಕವಾಗಿ ಕಾಂಗ್ರೆಸ್‌ ನಿಲುವು ಈ ಕಾರ್ಯಕ್ರಮದ ಉದ್ದೇಶಕ್ಕೆ ವಿರೋಧವಾಗಿರುವುದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಇಬ್ಬರೂ ನಾಯಕರು ಟ್ವೀಟ್‌ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!