ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ನಾವು ಕೋವಿಡ್ ನಿಯಮಾವಳಿಗಳನ್ನು ಪಾಲಿಸುತ್ತೇವೆ. ಅದರ ಪ್ರಕಾರವೇ ಮೇಕೆದಾಟು ಪಾದಯಾತ್ರೆಯನ್ನು ನಡೆಸುತ್ತೇವೆ. ಏನು ಕ್ರಮ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಮದ ಪ್ರಕಾರ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಂಡು ವ್ಯಕ್ತಿಗತ ಅಂತರವನ್ನು ಕಾಯ್ದುಕೊಂಡು ಕೈಗಳಿಗೆ ಗ್ಲೌಸ್ ಹಾಕಿಕೊಂಡೇ ಪಾದಯಾತ್ರೆ ಮಾಡುತ್ತೇವೆ ಎಂದರು.
15-20 ಮಂದಿ ಸೇರಿ ಪಾದಯಾತ್ರೆ ಮಾಡಿದರೆ ಸಮಸ್ಯೆ ಇಲ್ಲ, ಜನ ಸೇರಿಸಿದರೆ ಕ್ರಮಕೈಗೊಳ್ಳುತ್ತೇವೆ ಎಂಬ ಸಚಿವ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸರಕಾರದಲ್ಲಿದ್ದಾರೆ ಅವರು ಏನು ಕ್ರಮ ತೆಗೆದುಕೊಳ್ಳುತ್ತಾರೆ ತೆಗೆದುಕೊಳ್ಳಲಿ. ನಾವು ಎಲ್ಲವನ್ನು ಎದುರಿಸಲು ಸಿದ್ಧರಿದ್ದೇವೆ. ನಾವು ಕಾನೂನಿಗೆ ಗೌರವ ಕೊಡುತ್ತೇವೆ, ಕಾನೂನು ಉಲ್ಲಂಘನೆ ಮಾಡಲ್ಲ. ಒಂದು ವೇಳೆ ಅವರು ಅರೆಸ್ಟ್ ಮಾಡುತ್ತೇವೆಂದರೆ ಮಾಡಲಿ ಎಂದರು.
ರಾಜ್ಯದ ಬೇರೆ ಕಡೆ ಇಲ್ಲದ ಕೆಲ ನಿಯಮ ರಾಮನಗರ ಜಿಲ್ಲೆಗೆ ಮಾತ್ರ ಏಕೆ ಮಾಡಲಾಗಿದೆ? ಬೇಕಂತಲೇ 144 ಸೆಕ್ಷನ್ ಹಾಕಿದ್ದಾರೆ. ಸರಕಾರ ನಮ್ಮ ಪಾದಯಾತ್ರೆ ನಿಲ್ಲಿಸಲು ಪ್ಲಾನ್ ಮಾಡಿದೆ. ಅನಗತ್ಯ ಗೊಂದಲ ಮಾಡುವ ಉದ್ದೇಶದಿಂದ ಸರಕಾರ 144 ಹಾಕಿದೆ. ನಾವು 15 ಜನಪಾದಯಾತ್ರೆ ಮಾಡಿದರೆ ಬಿಡುತ್ತೇವೆ ಅಂತ ಕಾರಜೋಳ ಹೇಳುತ್ತಾರೆ. 15 ಜನ ನಡೆದರೆ ಅದು 144 ಕಲಂ ಉಲ್ಲಂಘನೆ ಅಲ್ವಾ? ಎಂದು ಪ್ರಶ್ನಿಸಿದರು.
ಬಸವ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದರು. ಅವರು ಏನು ಮಾಡಿದರು? ಬಿಜೆಪಿ ಎರಡುವರೆ ವರ್ಷದಿಂದ ಏನು ಮಾಡಿದೆ ಅಂತ ಲೆಕ್ಕ ಕೊಡಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.