ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಿಗಂತ ವರದಿ, ಹುಬ್ಬಳ್ಳಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕೆ ಹೊಣೆ ಹೊತ್ತು ಈಗಲಾದರೂ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯದ ಜನರು ಮುಖ್ಯಮಂತ್ರಿ ಹಾಗೂ ಸರ್ಕಾರದ ವ್ಯವಸ್ಥೆ ಮೇಲಿನ ನಂಬಿಕೆ ಕಳೆದುಕೊಳ್ಳಲಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಕಾನೂನು ಬದ್ಧವಾಗಿ ಪ್ರಾಸಿಕ್ಯೂಷನ್‌ಗೆ ಆದೇಶ ನೀಡಿದ್ದರು. ಸಿಎಂ, ಡಿಸಿಎಂ ಸೇರಿ ಇಡೀ ಸರ್ಕಾರ ಅವರ ವಿರುದ್ಧ ಟೀಕೆ ಮಾಡಿದ್ದರು. ಸಂವಿಧಾನ ಹುದ್ದೆಗೆ ಅಪಮಾನ ಮಾಡಿದ್ದರು. ಈಗ ರಾಜ್ಯಪಾಲರ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ ಎಂದರು.
ಈ ಪ್ರಕರಣ ಮುಖ್ಯಮಂತ್ರಿ ವಿರುದ್ಧ ತನಿಖೆ ಆರಂಭವಾಗಬೇಕು. ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರ ಸಹಕಾರ ನೀಡಬೇಕು. ವಿಚಾರಣೆ ಆಗುವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಾದ ಬಳಿಕ ತನಿಖೆ ಆರಂಭವಾಗಲಿದೆ. ಅವರ ರಾಜೀನಾಮೆ ನೀಡದಿದ್ದರೆ ಅಧಿಕಾರಿಗಳು ತನಿಖೆಯನ್ನು ಪ್ರಾಮಾಣಿಕವಾಗಿ ನಡೆಸುವುದು ಅಸಾಧ್ಯ. ಇದ್ದರಿಂದ ಕಾನೂನು ವ್ಯವಸ್ಥೆ ಮೇಲೆ ಜನರಿಗೆ ಅಪನಂಬಿಕೆ ಮೂಡಲಿದೆ ಎಂದರು.
ಲೋಕಸಭಾ ಚುನಾವಣೆ ವೇಳೆ ಸಂವಿಧಾನ ರಕ್ಷಣೆ ಮಾಡುವುದಾಗಿ ಕೈಯಲ್ಲಿ ಹಿಡಿದು ಅಲೆದಾಡಿದ್ದರು. ಈಗ ನೋಡಿದರೆ ಸಂವಿಧಾನ ಅಂಗವಾಗಿರುವ ರಾಜ್ಯಪಾಲರ ಹುದ್ದೆಗೆ ಅವಮಾನ ಮಾಡುತ್ತಿದ್ದಾರೆ. ಇದು ಸಂವಿಧಾನಕ್ಕೆ ಅಪಪ್ರಚಾರ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಒಳಪಡಲಿ. ಮುಂದೆ ತಪಿತಸ್ಥರಲ್ಲದಿದ್ದರೆ ಮುಖ್ಯಮಂತ್ರಿಯಾಗಿ ಮುಂದುವರೆಯಲಿ. ಹಿಂದೆ ಆಕಾರ್ವತಿ ಹಗರಣದಲ್ಲಿ ರಾಜೀನಾಮೆ ನೀಡಬೇಕಿತ್ತು. ಆದರೆ ಇಡೀ ಪ್ರಕರಣ ಮುಚ್ಚಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಂಡತನ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಲಿದೆ. ಕಾಂಗ್ರೆಸ್ ಹೈಕಮಾಂಡ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.