ಹೊಸದಿಗಂತ ವರದಿ, ಮಂಗಳೂರು:
- ಸುರೇಶ್ ಡಿ. ಪಳ್ಳಿ
ಇದು, ಸರ್ಕಾರಿ ಶಾಲೆಗಳಿಗೆ ಬೂಸ್ಟ್ ನೀಡುವ ಶಾಲೆ! ಇಲ್ಲಿ ಬಿಹಾರಿ ಭಾಷಾ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಬರೊಬ್ಬರಿ 53 ಮಕ್ಕಳು ಕನ್ನಡ ವರ್ಣಮಾಲೆಯ ಕಲಿಕೆ ಆರಂಭಿಸಿದ್ದು, ಮಕ್ಕಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆಯಲ್ಲಿ ಮತ್ತೆ ಕಸ್ತೂರಿ ಕನ್ನಡದ ಕಂಪು ಪಸರಲಾರಂಭಿಸಿದೆ.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಬೋಳಾರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಈಗ ನಾಡಿನ ಗಮನಸೆಳೆಯುತ್ತಿರುವ ಅಕ್ಷರ ದೇಗುಲ. ಶಿಕ್ಷಕಿಯೊಬ್ಬರ ಅವಿರತ ಶ್ರಮದಿಂದ ಇಲ್ಲಿ ಬಿಹಾರಿ ಮಕ್ಕಳು ಸರ್ಕಾರಿ ಶಾಲೆಗೆ ಸೇರಿ ಕನ್ನಡ ಕಲಿಯುವಂತಾಗಿದೆ. ಗೀತಾ ಜುಡಿತ್ ಸಲ್ಡಾನ್ಹಾ ಹೊಸ ಬದಲಾವಣೆಗೆ ನಾಂದಿ ಹಾಡಿದ ಶಿಕ್ಷಕಿ.
ಮುಚ್ಚುವ ಹಂತದಲ್ಲಿದ್ದ ಶಾಲೆಯಿದು!
ಗೀತಾ ಜುಡಿತ್ ಸಲ್ಡಾನ್ಹಾ ಅವರು ಈ ಶಾಲೆಗೆ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಬಂದಾಗ ಕೇವಲ 5 ಮಕ್ಕಳಿದ್ದು, ಶಾಲೆ ಮುಚ್ಚುವ ಸ್ಥಿತಿಯಲ್ಲಿತ್ತು. ಆದರೆ ಜುಡಿತ್ ಅವರ ವಿಶೇಷ ಪ್ರಯತ್ನದಿಂದಾಗಿ ಹೊಸ ಬದಲಾಣೆಗೆ ತೆರೆದುಕೊಂಡಿದೆ. ಬಿಹಾರದಿಂದ ಬಂದು ಸ್ಥಳೀಯವಾಗಿ ಕಾರ್ಮಿಕರಾಗಿ ದುಡಿಯುತ್ತಿರುವ ಹಲವು ಮಂದಿ ಇಲ್ಲಿದ್ದು, ಅವರ ಮಕ್ಕಳು ಶಾಲೆಯಿಂದ ದೂರವೇ ಇದ್ದರು. ಶಿಕ್ಷಣವೆಂಬುದು ಅವರಿಗೆ ಮರೀಚಿಕೆಯಾಗಿತ್ತು. ಇದನ್ನು ಮನಗಂಡ ಈ ಶಿಕ್ಷಕಿ ಜುಡಿತ್ ಅವರು ಮನೆ ಮನೆಗೆ ತೆರಳಿ ಕಾರ್ಮಿಕರ ಮನ ಒಲಿಸಿ ಮಕ್ಕಳಿಗೆ ಅಕ್ಷರದ ಕನಸು ಮೂಡಿಸಿದ್ದಾರೆ. ಶಿಕ್ಷಕಿಯ ಮಾತಿನಂತೆ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿದ್ದಾರೆ ಅದರಂತೆ ಕನ್ನಡ ಶಾಲೆಯಲ್ಲೀಗ ಹೊಸ ಬೆಳಕೊಂದು ಮೂಡಿದಂತಾಗಿದೆ. ಬಿಹಾರಿ ಭಾಷಾ ಮಕ್ಕಳು ಕನ್ನಡದ ವರ್ಣಮಾಲೆ ಜೋಡಣೆಯಲ್ಲಿ ತೊಡಗಿಸಿಕೊಂಡಿವುದು ಹೊಸ ಬೆಳವಣಿಗೆಯೊಂದಕ್ಕೆ ಕಾರಣವಾಗಿದೆ.
ಶಾಲೆಗೊಂದು ಕಳೆ ಬಂತು
ಕಾರ್ಮಿಕರನ್ನು ಎಷ್ಟೇ ಮನವೊಲಿಸಿದರೂ ಆರಂಭದಲ್ಲಿ ಅವರು ಒಪ್ಪಿರಲಿಲ್ಲ. ಆಗಾಗ ಅವರನ್ನು ಭೇಟಿ ಮಾಡಿ ಮನವೊಲಿಸಿದ ಬಳಿಕ ಒಪ್ಪಿಕೊಂಡರು. ಈಗ ಆ ಮಕ್ಕಳು ಕನ್ನಡ ಕಲಿಕೆ ಆರಂಭಿಸಿದ್ದಾರೆ. ಅವರ ಲವಲವಿಕೆ, ಉತ್ಸಾಹ ಶಾಲೆಗೊಂದು ಕಳೆ ತಂದಿದೆ ಎನ್ನುತ್ತಾರೆ ಗೀತಾ ಜುಡಿತ್ ಸಲ್ಡಾನ್ಹಾ ಅವರು.