ಹೊಸದಿಗಂತ ವರದಿ, ಗದಗ:
೪೦-೫೦ % ಕಮೀಷನ್ ಕುರಿತು ಭ್ರಷ್ಟಾಚಾರ ನಡೆದಿದ್ದರೆ ರಾಜ್ಯದ ಜನ ನಮ್ಮನ್ನು ರಸ್ತೆಯಲ್ಲಿ ಓಡಾಡುವದಕ್ಕೂ ಬಿಡುತ್ತಿರಲಿಲ್ಲ. ಮಾಜಿ ಮುಖ್ಯಮಂತ್ರಿಗಳಾಗಿ ಇತಿಮಿತಿಯಲ್ಲಿ ಏನಾಗಿದೆ ಎಂದು ಚರ್ಚೆ ಮಾಡಬೇಕು, ದೂರು ನೀಡಬೇಕು. ಆದರೆ, ಸುಳ್ಳು ಹೇಳಿಕೆಗಳನ್ನು ನೀಡಬಾರದು ಎಂದು ಸಚಿವ ಉಮೇಶ ಕತ್ತಿ ಅವರು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಂಪಯ್ಯ ಯಾರು ಅನ್ನವುದು ಗೊತ್ತಿಲ್ಲ ಬಹಳ ಜನ ಅಸೋಸಿಯೇಶನ್ ಅಧ್ಯಕ್ಷರು ಇದ್ದಾರೆ ಅವರಲ್ಲಿ ಕೆಂಪಯ್ಯ ಅವರು ಒಬ್ಬರು. ಭ್ರಷ್ಟಾಚಾರ ನಡೆದಿದ್ದರೆ ಕುಮಾರಸ್ವಾಮಿ ಆದಿಯಾಗಿ ಕೆಂಪಯ್ಯ, ಸಿದ್ದರಾಮಯ್ಯ ಕಂಪ್ಲೇಟ್ ಕೊಡಬೇಕು. ಸರಕಾರದ ಬಗ್ಗೆ, ಮಂತ್ರಿಗಳ ಬಗ್ಗೆ ಮತ್ತು ನನ್ನ ವಿರುದ್ದ ಆರೋಪ ಇದ್ದರೂ ಕಂಪ್ಲೇಟ್ ಕೊಡಬೇಕು ಅದನ್ನು ಬಿಟ್ಟು ಬಾಯಿಗೆ ಬಂದದ್ದನ್ನು ಹೇಳಿದರೆ ಸುಳ್ಳು ನಿಜವಾಗುತ್ತಾ ಎಂದು ಎಂದು ಹೇಳಿದರು.
ಉತ್ತರ ಕರ್ನಾಟಕ್ಕೆ ಅನ್ಯಾಯ ಆದರೆ ರಾಜೀನಾಮೆಗೂ ಸಿದ್ಧ :
ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹ ಮಾಡಿದರೆ ರಾಜೀನಾಮೆಗೆ ಸಿದ್ದ ಎಂದು ಉತ್ತರ ಕರ್ನಾಟಕ ಪರವಾಗಿ ಮತ್ತೊಮ್ಮೆ ಉಮೇಶ ಕತ್ತಿ ಅವರು ಧ್ವನಿ ಎತ್ತಿದ್ದರು. ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತಬೇಕು. ಉತ್ತರ ಕರ್ನಾಟಕ ವಿಷಯವಾಗಿ ಮಾಧ್ಯಮದವರು ಸ್ಪಂಧಿಸಬೇಕು. ಅಭಿವೃದ್ಧಿ ನಿಂತರೆ ಹೋರಾಟ ಇದ್ದೇ ಇರುತ್ತೆ ಎಂದು ಹೇಳಿದರು.
ಅಖಂಡ ಕರ್ನಾಟಕ ಸಿಎಂ ಆಗುವ ಯೋಗ್ಯತೆ ನನಗಿದೆ :
ನಮ್ಮವರೇ ಸಿಎಂ ಆಗಿರುವಾಗ ಸಿಎಂಗಾಗಿ ಆಸೆ ಪಡುವದಿಲ್ಲ ಸಿಎಂ ಅವಕಾಶ ಬಂದರೆ ಅದೃಷ್ಠ ಅನ್ನಬೇಕು. ನಾನು ಬೆನ್ನು ಹತ್ತಿ ಹೋಗುವದಿಲ್ಲ ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು. ನಾನು ಹಿರಿಯ ರಾಜಕಾರಣಿ, ಅನುಭವ ಇದ್ದವನು, ಇನ್ನೂ ೧೫ ವರ್ಷ ರಾಜಕೀಯ ಜೀವನ ಇದೆ, ಭವಿಷ್ಯದಲ್ಲಿ ನೋಡೋಣ ಎಂದು ಸಚಿವ ಉಮೆಶ ಕತ್ತಿ ಅವರು ಹೇಳಿದರು.