ಹೊಸದಿಗಂತ ವರದಿ,ಮೈಸೂರು:
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾದರಿಯಲ್ಲೇ ರಾಜ್ಯದಲ್ಲೂ ಮುಖ್ಯಮಂತ್ರಿಗಳು ಜೈಲಿನಿಂದಲೇ ಆಡಳಿತ ನಡೆಸುವ ಸ್ಥಿತಿ ಬರಲಿದೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದರು.
ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರದಲ್ಲಿ ೫,೦೦೦ ಸಾವಿರ ಕೋಟಿ ರೂ. ಹಗರಣವಾಗಿದೆ. ಮುಖ್ಯಮಂತ್ರಿಗಳ ಕುಟುಂಬದ ಹೆಸರಿನಲ್ಲಿ ಕಾನೂನುಬಾಹಿರವಾಗಿ ನಿವೇಶನ ಪಡೆದಿರುವ ಬಗ್ಗೆ ರಾಜ್ಯಪಾಲರು ಸರ್ಕಾರಕ್ಕೆ ನೋಟಿಸ್ ನೀಡಿದ್ದರು. ಸರ್ಕಾರದ ವತಿಯಿಂದ ಸರಿಯಾದ ಉತ್ತರ ನೀಡಿಲ್ಲ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಮುಖ್ಯಮಂತ್ರಿಗೆ ಸೂಚನೆ ನೀಡಬೇಕಿತ್ತು. ಆದರೆ ಬಿಜೆಪಿ ತಪ್ಪು ಮಾಡಿದೆ ಅಂತಾ ನೆಪ ಹೇಳುತ್ತಿದ್ದಾರೆ.
ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಜೈಲಿನಿಂದ ಆಧಿಕಾರ ಮಾಡುತ್ತಿದ್ದಾರೆ. ನಮ್ಮದೇನು ಅನ್ನೋ ರೀತಿ ಕರ್ನಾಟಕದ ಕಾಂಗ್ರೆಸ್ ಸರಕಾರವಿದೆ. ಈ ಬಗ್ಗೆ ನಾವು ರಾಷ್ಟ್ರಪತಿಗಳಿಗೆ ದೂರು ನೀಡುತ್ತೇವೆ. ಸಾವಿರಾರು ಕೋಟಿ ರೂ. ಹಗರಣವಾಗಿರುವುದರಿಂದ ಇ.ಡಿ ಮೂಲಕ ತನಿಖೆಗೆ ಒತ್ತಾಯಿಸುತ್ತೇವೆ. ನ್ಯಾಯ ದೊರಕುವ ತನಕ ಈ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಗುಡುಗಿದರು.
ಬಿಜೆಪಿಯ ಕೆಲ ಮುಖಂಡರು ಬಳ್ಳಾರಿಗೆ ಪರ್ಯಾಯ ಪಾದಯಾತ್ರೆ ನಡೆಸುವ ಬಗ್ಗೆ ಬೆಳಗಾವಿಯಲ್ಲಿ ಸಭೆ ಸೇರಿರುವ ಬಗ್ಗೆ ನನಗೂ ಮಾಹಿತಿ ಬಂದಿದೆ. ಪಕ್ಷದ ಮಾಜಿ ಸಂಸದರು ಹಾಗೂ ಕೆಲ ಮಾಜಿ ಸಚಿವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಯಾವ ಕಾರಣಕ್ಕೆ ಸಭೆ ಸೇರಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ. ಪರ್ಯಾಯ ಸಭೆ ಚರ್ಚೆ ಕೇಳಿ ಕಾರ್ಯಕರ್ತನಾಗಿ ನನಗೆ ಮುಜುಗರ ಆಗುತ್ತದೆ. ಅವರೆಲ್ಲಾ ಹಿರಿಯರಿದ್ದಾರೆ ಈ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ರಾಜಮನೆತನದವರ ಅಧಿಕಾರ ಮೊಟಕಿಗೆ ವಿರೋಧ
ಚಾಮುಂಡಿ ಬೆಟ್ಟ ಪ್ರಾಧಿಕಾರದ ಹೆಸರಿನಲ್ಲಿ ಸರ್ಕಾರ ರಾಜವಂಶಸ್ಥರ ಅಧಿಕಾರವನ್ನು ಮೊಟಕುಗೊಳಿಸಲು ಸಂಚು ರೂಪಿಸಿದ್ದು, ಅವರಿಗೆ ಬೇಕಾದ ಸದಸ್ಯರನ್ನು ನೇಮಕ ಮಾಡಿಕೊಂಡು ಪ್ರಾಧಿಕಾರದ ಮೂಲಕ ತಿದ್ದುಪಡಿ ಮಾಡಹೊರಟಿದೆ. ಅದಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಬೆಟ್ಟದ ವಿಚಾರದಲ್ಲಿ ಸರ್ಕಾರ ವಿವೇಚನೆಯಿಂದ ನಡೆದುಕೊಂಡಿಲ್ಲ. ಚಾಮುಂಡಿ ಬೆಟ್ಟದ ವಿಚಾರದಲ್ಲಿ ರಾಜ ಮನೆತನದ ಅಧಿಕಾರ ಮೊಟಕುಗೊಳಿಸಲು ಜನರ ವಿರೋಧವಿದೆ. ಇದಕ್ಕೆ ನನ್ನದು ವಿರೋಧವಿದೆ. ಈ ಬಗ್ಗೆ ಮೈಸೂರು ದಸರಾ ಹೈ ಪವರ್ ಕಮಿಟಿಯಲ್ಲಿ ಸಿಎಂ ಜೊತೆ ಮಾತನಾಡುತ್ತೇನೆ ಎಂದರು.