ಸಿದ್ದರಾಮಯ್ಯ ಪಕ್ಷದಲ್ಲೇ ಬೆಂಕಿ ಹೊತ್ತಿದೆ, ಒಬ್ಬೊಬ್ರೆ ಪಕ್ಷ ಬಿಟ್ಟು ಬರ‍್ತಿದ್ದಾರೆ: ಸಚಿವ ಎಸ್.ಟಿ.ಸೋಮಶೇಖರ್

ದಿಗಂತ ವರದಿ ಮೈಸೂರು:

ವಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷದಲ್ಲೇ ಬೆಂಕಿ ಹೊತ್ತಿ ಉರಿಯುತ್ತಿದೆ. ಅಲ್ಲಿದ್ದವರೇ ಒಬ್ಬೊಬ್ಬರಾಗಿ ಹೊರಗೆ ಬರುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದರು.
ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರು ಸಚಿವರು ಸಂಪರ್ಕದಲ್ಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅವರ ಕಾಂಗ್ರೆಸ್ ಪಕ್ಷದಿಂದಲೇ ಹಲವು ಮಂದಿ ಹೊರ ಬರುತ್ತಿದ್ದರಲ್ಲ. ಚುನಾವಣೆ ಹತ್ತಿರ ಬಂದಾಗ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೋಗುವುದು ಸಾಮಾನ್ಯ ಎಂದರು.
ಅವ್ಯವಹಾರ ನಡೆದಿರುವ ಸಹಕಾರಿ ಬ್ಯಾಂಕ್ ಹಾಗೂ ಸಂಘಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ 7 ಸಹಕಾರಿ ಗೃಹ ನಿರ್ಮಾಣ ಸಂಘ ಸೇರಿದಂತೆ, ವಿವಿಧ ಬ್ಯಾಂಕ್ ಗಳ ವಿರುದ್ದ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ಮಾಡಿದ್ದೇವೆ. ಅವ್ಯಹಾರ ನಡೆದಿರುವ ಸಹಕಾರ ಸಂಘ ಹಾಗೂ ಬ್ಯಾಂಕ್ ಗಳ ಆಸ್ತಿಗಳನ್ನು ಜಪ್ತಿ ಮಾಡಲಾಗುವುದು. ಈ ಬಗ್ಗೆ ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಹಕಾರ ಇಲಾಖೆಯ ಕಾನೂನನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೇನು ಗೊತ್ತಿಲ್ಲ. ನನಗೆ ಯಾವುದೇ ಮಾಹಿತಿ ಇಲ್ಲ, ಅದರ ಗಂಧವೂ ಗೊತ್ತಿಲ್ಲ ಗಾಳಿಯೂ ಗೊತ್ತಿಲ್ಲ. ಮಾಹಿತಿ ಸಿಕ್ಕರೆ ಹೇಳುತ್ತೇನೆ. ಸಚಿವ ಸಂಪುಟ ವಿಸ್ತರಣೆ ಮಾಡುವುದು ಸಿಎಂ ಪರಮಾಧಿಕಾರ. ಅವರು ವಿಸ್ತರಣೆ ಆದರೂ ಮಾಡಬಹುದು ಪುನರ್‌ರಚನೆ ಆದರೂ ಮಾಡಬಹುದು. ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಸಚಿವರು ಶಾಸಕರ ಕರೆ ಸ್ವೀಕರಿಸುತ್ತಿಲ್ಲ ಎಂದು ಶಾಸಕ ಸೋಮಶೇಖರ್ ರೆಡ್ಡಿ ಮಾಡಿರುವ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇದು ಸತ್ಯಕ್ಕೆ ದೂರವಾದ ವಿಚಾರ. ಸಚಿವ ಸಂಪುಟ ಸಭೆ, ಕಾರ್ಯಕ್ರಮಗಳಲ್ಲಿ ಇದ್ದಾಗ ಕರೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಸಭೆಯ ನಂತರ ನಾವೇ ಸಂಪರ್ಕ ಮಾಡಿದ್ದೇವೆ. ಇಲ್ಲ ನಮ್ಮ ಆಪ್ತ ಸಹಾಯಕರು ಅಧಿಕಾರಿಗಳು ಸಂಪರ್ಕಿಸಿರುತ್ತಾರೆ. ಎಲ್ಲೋ ಒಂದು ಅಥವಾ ಎರಡು ಬಾರಿ ಕರೆ ಈ ರೀತಿ ಆಗಿರಬಹುದು. ಯಾವ ಸಚಿವರು ಕರೆ ಸ್ವೀಕರಿಸಿಲ್ಲ ಅನ್ನುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದರು.
ಮೈಸೂರಿನಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿಚಾರವಾಗಿ ಶಾಸಕರು, ಸಂಸದರ ನಡುವೆ ನಡೆಯುತ್ತಿರುವ ಜಟಾಪಟಿಗೆ ಪ್ರತಿಕ್ರಿಯಿಸಿದ ಸಚಿವರು, ಶಾಸಕರು -ಸಂಸದರ ನಡುವೆ ಮಾಹಿತಿ ವಿಚಾರವಾಗಿ ಗೊಂದಲ ಇದೆ. ಇದನ್ನು ಸದ್ಯದಲ್ಲೇ ಬಗೆಹರಿಸಲಾಗುವುದು. ಖುದ್ದು ಪಕ್ಷದ ರಾಜ್ಯಾಧ್ಯಕ್ಷರು ಎಲ್ಲರನ್ನೂ ಕರೆದು ಮಾತನಾಡುತ್ತಾರೆ. ಯಾರು ಅನಗತ್ಯವಾಗಿ ಮಾತನಾಡದಂತೆ ಸೂಚಿಸಿದ್ದಾರೆ. ಅವರೇ ಸಮಸ್ಯೆ ಬಗೆಹರಿಸುವ ಹೊಣೆ ಹೊತ್ತಿದ್ದಾರೆ. ಈಗಾಗಿ ನಾನು ಮಧ್ಯ ಪ್ರವೇಶ ಮಾಡಿ ಸಭೆ ಮಾಡುವ ಅಗತ್ಯತೆ ಇಲ್ಲ. ಗೊಂದಲ ಉಂಟಾಗಿರುವುದು ಮಾಹಿತಿ ವಿಚಾರವಾಗಿ. ಮೈಸೂರು ನಗರ ಪಾಲಿಕೆ ಆಯುಕ್ತರಿಗೆ ಪಾಸಿಟಿವ್ ಆಗಿದೆ. ದೂರವಾಣಿ ಮೂಲಕ ಈ ಬಗ್ಗೆ ಮಾತನಾಡಿದ್ದೇನೆ ಶ್ರೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!