ಸಿದ್ದೇಶ್ವರ ಶ್ರೀಗಳ ಅಂತಿಮ ದರುಶನ ಪಡೆದ ಸಚಿವ ಪ್ರಭು ಚವ್ಹಾಣ

ಹೊಸ ದಿಗಂತ ವರದಿ, ಬೀದರ:

ಪಶು ಸಂಗೋಪನೆ ಸಚಿವರಾದ ಪ್ರಭು ಬಿ. ಚವ್ಹಾಣ ಅವರು  ವಿಜಯಪುರದ ಸೈನಿಕ ಶಾಲೆಯ ಮೈದಾನದಲ್ಲಿ ಜ್ಞಾನ ಯೋಗಾಶ್ರಮದ  ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಂತಿಮ ದರುಶನ ಪಡೆದರು.

ಬಳಿಕ ಮಾತನಾಡಿದ ಸಚಿವರು, ನಡೆದಾಡುವ ದೇವರು ಪೂಜ್ಯ ಸಿದ್ದೇಶ್ವರ ಶ್ರೀಗಳ ಅಗಲಿಕೆಯು ತೀವ್ರ ನೋವನ್ನು ಉಂಟುಮಾಡಿದೆ. ಶ್ರೀಗಳು ದೇಶ ಕಂಡ ಶ್ರೇಷ್ಠ ಸಂತರಾಗಿದ್ದರು. ತಮ್ಮ ಸರಳ ನಡೆ, ನುಡಿ ಮತ್ತು ಪ್ರವಚನದ ಮೂಲಕ ಭಕ್ತರ ಮನೆ ಮಾತಾಗಿದ್ದರು. ಅವರ ವಾಣಿಯನ್ನು ಆಲಿಸಲು ನಾಡಿನಾದ್ಯಂತ ಭಕ್ತರು ಹಾತೊರೆಯುತ್ತಿದ್ದರು. ಅವರು ಜ್ಞಾನದ ಖಣಿಯಂತಿದ್ದರು ಎಂದು ಹೇಳಿದರು.

ಪೂಜ್ಯರಿಗೂ ಮತ್ತು ಬೀದರ ಜಿಲ್ಲೆಗೂ ಅವಿನಾಭಾವ ಸಂಬಂಧವಿತ್ತು. ಸಾಕಷ್ಟು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದರು. ಔರಾದ(ಬಿ)ಗೆ ಮೂರು ಬಾರಿ ಬಂದು ಜ್ಞಾನದಾಸೋಹ ಮಾಡಿದ್ದರು. ಸಂತಪೂರದಲ್ಲಿರುವ ಬಸವೇಶ್ವರ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದಿದ್ದರು. ಕೆಲವು ದಿನಗಳ ಹಿಂದೆ ಭಾಲ್ಕಿಯಲ್ಲಿ ಪ್ರವಚನ ಮಾಡಿದ್ದಾಗ ಅವರನ್ನು ಭೇಟಿ ಮಾಡಿ ಅವರ ಪ್ರವಚನ ಕೇಳಿ ಪುನೀತನಾಗಿದ್ದೇನೆ ಎಂದು ಸ್ಮರಿಸಿದರು.

ಪೂಜ್ಯರ ಅಗಲಿಕೆಯಿಂದ ಕೇವಲ ರಾಜ್ಯವಲ್ಲದೇ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ದೈಹಿಕವಾಗಿ ನಮ್ಮನ್ನು ಬಿಟ್ಟು ಹೋದರೂ ಅವರು ಬಿಟ್ಟು ಹೋದ ಸಂದೇಶಗಳು ಮತ್ತು ವಿಚಾರಧಾರೆಗಳು ಶಾಶ್ವತವಾಗಿ ಇರುತ್ತವೆ. ದೇವರು ಭಕ್ತರಿಗೆ ಪೂಜ್ಯರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಮತ್ತು ಶ್ರೀಗಳ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರಾದ ಪ್ರಭು ಚವ್ಹಾಣ ಅವರು ತಿಳಿಸಿದರು.

ಪಶುವೈದ್ಯಕೀಯ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ವಸಂತ ವಕೀಲ, ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಶಿವಾಜಿ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ಖಂಡೋಬಾ ಕಂಗಟೆ, ಪ್ರಕಾಶ ಜೀರ್ಗೆ, ಬಾಲಾಜಿ ವಾಗ್ಮಾರೆ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!