ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಶಿವರಾತ್ರಿ ಪ್ರಯಕ್ತ ಇಂದು ಸಂಜೆ 5 ಗಂಟೆಗೆ ನೆರವೇರಲಿರುವ ಸಿದ್ಧಾರೂಢ ಸ್ವಾಮೀಜಿಗಳ ಅದ್ಧೂರಿ ರಥೋತ್ಸಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಥೋತ್ಸವಕ್ಕೆ ಸಾಕ್ಷಿಯಾಗಲು ಸಹಸ್ರಾರು ಭಕ್ತರು ವಿವಿಧೆಡೆಯಿಂದ ಹುಬ್ಬಳ್ಳಿಯತ್ತ ಆಗಮಿಸುತ್ತಿದ್ದಾರೆ.
ಸಿದ್ಧಾರೂಢ ಸ್ವಾಮೀಜಿಯ ರಥೋತ್ಸವ ಸಂಜೆ ವೇಳೆ ನಡೆಯಲಿದೆ. ಆದ್ದರಿಂದ ರಥೋತ್ಸವದಲ್ಲಿ ಭಾಗವಹಿಸಿ ಹಿಂದಿರುಗುವ ಭಕ್ತರು ಹಾಗೂ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಇಂದು ರಾತ್ರಿ ಹುಬ್ಬಳ್ಳಿಯಿಂದ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ವರ್ಷ ಮಹಾ ಶಿವರಾತ್ರಿ ಅವಧಿಯಲ್ಲಿ ಸಿದ್ಧಾರೂಢ ಸ್ವಾಮೀಜಿಯ ಸನ್ನಿಧಿಯಲ್ಲಿ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶ್ರೀಗಳ ರಥೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹುಬ್ಬಳ್ಳಿ-ಧಾರವಾಡ ಅವಳಿ ನಗರ, ಸುತ್ತ ಮುತ್ತಲಿನ ಊರುಗಳಲ್ಲದೆ, ಗೋವಾ, ಶಿವಮೊಗ್ಗ, ದಾವಣಗೆರೆ, ರಾಣೆಬೆನ್ನೂರು, ಕೊಪ್ಪಳ, ಹೊಸಪೇಟೆ, ಕುಷ್ಟಗಿ, ಗಂಗಾವತಿ, ರಾಯಚೂರು, ಸಿಂಧನೂರು, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರಬಹುದೆಂದು ನಿರೀಕ್ಷಿಸಲಾಗಿದೆ.
ಸಾರ್ವಜನಿಕರ ಬೇಡಿಕೆಯ ಮೇರೆಗೆ ಇಂದು ಗುರುವಾರ ಶ್ರೀಗಳ ರಥೋತ್ಸವದ ನಂತರ ಭಕ್ತರು ತಮ್ಮ ಊರುಗಳಿಗೆ ಹಿಂದಿರುಗಲು ಅನುಕೂಲವಾಗುವಂತೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಗಳು ಇಲ್ಲಿನ ಹೊಸೂರು ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.