ಹೊಸ ದಿಗಂತ ವರದಿ,ಬಳ್ಳಾರಿ:
ಗಣಿನಾಡಿನ ಶಕ್ತಿ ದೇವತೆ ಶ್ರೀ ಕನಕ ದುರ್ಗಮ್ಮ ದೇವಿ ಸಿಡಿಬಂಡಿ ರಥೋತ್ಸವ ಅತ್ಯಂತ ವೈಭವದಿಂದ, ವಿಜೃಂಭಣೆಯಿಂದ ಮಂಗಳವಾರ ಸಂಜೆ ನಡೆಯಿತು. ಜಿಲ್ಲೆ, ರಾಜ್ಯ ಸೇರಿದಂತೆ ನೆರೆಯ ಆಂದ್ರದ ಸಾವಿರಾರು ಭಕ್ತರು ಅತ್ಯಂತ ವೈಭವದ ರಥೋತ್ಸವಕ್ಕೆ ಸಾಕ್ಷೀಯಾದರು. ಸಂಜೆ ಇಳಿ ಹೊತ್ತಿನಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ ಸಾವಿರಾರು ಜನ ಭಕ್ತರು ಸಿಡಿಬಂಡಿ ರಥೋತ್ಸವವನ್ನು ವೀಕ್ಷಿಸಿ ಕಣ್ತುಂಬಿಕೊಂಡರು.3 ಜೋಡು ಎತ್ತುಗಳನ್ನು ಕಟ್ಟಿ ದೇಗುಲದ ಸುತ್ತ ಮೂರು ಸುತ್ತು ಸಿಡಿಬಂಡಿ ಉತ್ಸವ ನಡೆಯಿತು. ರಥೋತ್ಸವ ಮುಂದೆ ಸಾಗುತ್ತಿದ್ದಂತೆ ನೆರೆದ ಸಾವಿರಾರು ಭಕ್ತರು ಹೂ, ಬಾಳೆಹಣ್ಣು, ಉತ್ತತ್ತಿಗಳನ್ನು ರಥೋತ್ಸವಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಕೆಲವರು ಕೋಳಿಗಳನ್ನು ಎಸೆದಿರುವುದು ಕಂಡು ಬಂತು. ಶ್ರೀಕನಕ ದುರ್ಗಮ್ಮ ದೇವಿ ದೇಗುಲ ಸುತ್ತಲೂ ಸಂಜೆ ಸುಮಾರು ಒಂದು ಲಕ್ಷ ಜನರು ಜಮಾಯಿಸಿದ್ದು, ಅಂಗಡಿ, ಮನೆ ಮೇಲೆ, ಹೋಟೆಲ್ ಮೇಲೆ ನಿಂತು ರಥೋತ್ಸವವನ್ನು ವೀಕ್ಷಿಸಿ ಕಣ್ತುಂಬಿಕೊಂಡರು. ಎಲ್ಲ ರಸ್ತೆಗಳಲ್ಲಿ ಜನವೋಜನ ನೆರದಿತ್ತು. ಸಾರಿಗೆ ಸಚಿವ ಬಿ.ಶ್ರೀರಾಮುಲು, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಗ್ರಾಮೀಣ ಶಾಸಕಬಿ.ನಾಗೇಂದ್ರ, ಎಮ್ಮೆಲ್ಸಿ ಸತೀಶ್, ನಾರಾ ಭರತ್ ರೆಡ್ಡಿ, ರಾವೂರ್ ಸುನೀಲ್ ಸೇರಿದಂತೆ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆರ್.ಪ್ರಕಾಶ್ ರಾವ್, ದೇಗುಲದ ಅಧಿಕಾರಿ ಹನುಮಂತಪ್ಪ, ದೇಗುಲದ ಪ್ರಧಾನ ಅರ್ಚಕರು ,ವಿವಿಧ ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು.