ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ, ಮರಾಠಿ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಶುಕ್ರವಾರ ಸಾಲು ಸಾಲು ಪ್ರತಿಭಟನೆಗೆ ಕರೆ ನೀಡಿದ್ದು, ಮಾರ್ಚ್ 3 ರಂದು ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ಹಾಗೂ ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ ಮಾಡುವುದಾಗಿ ಘೋಷಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಮಾರ್ಚ್ 22 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲು ನಿರ್ಧರಿಸಲಾಗಿದೆ.
ಮಾರ್ಚ್ 3 ರಂದು ರಾಜಭವನಕ್ಕೆ ಮುತ್ತಿಗೆ ಹಾಗೂ ಮಾರ್ಚ್ 7 ರಂದು ಬೆಳಗಾವಿ ಚಲೋಗೆ ಕರೆ ನೀಡಲಾಗಿದ್ದು, ಇದಕ್ಕೆ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಅಲ್ಲದೆ ಮಾರ್ಚ್ 11 ರಂದು ಮೇಕೆದಾಟಿಗಾಗಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್, ಮಾ.14 ರಾಮನಗರ ಮಂಡ್ಯ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಮತ್ತು ಮಾ.17 ರಂದು ಹೊಸಕೋಟೆ – ಚೆನ್ನೈ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಲಾಗಿದೆ.
ಕರ್ನಾಟಕ ಬಂದ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಬೆಂಬಲ ಕೊಡಬೇಕು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇಲಾಖೆಯ ಎಲ್ಲ ಬಸ್ಗಳನ್ನು ಅಂದು ನಿಲ್ಲಿಸಬೇಕು. ನಮಗೆ ಹೋಟೆಲ್ ಮಾಲೀಕರು, ಸಿನಿಮಾ ರಂಗದವರು, ಸರ್ಕಾರಿ ನೌಕರರು, ದೊಡ್ಡ ಹಾಗೂ ಸಣ್ಣ ವಾಹನಗಳ(ಲಾರಿ, ಖಾಸಗಿ ಬಸ್, ಕಾರು, ವ್ಯಾನ್) ಮಾಲೀಕರು ನಮಗೆ ಬೆಂಬಲ ಸೂಚಿಸಬೇಕು ಎಂದು ವಾಟಾಳ್ ಮನವಿ ಮಾಡಿದ್ದಾರೆ.