ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟಾರ್ಟಪ್ ಗಳಿಗೆ ಹಣಕಾಸು ಒದಗಿಸುವ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಕುಸಿತವು ಭಾರತದ ಸ್ಟಾರ್ಟಪ್ ಪರಿಸರದಲ್ಲೂ ಕಳವಳ ಉಂಟಾಗುವುದಕ್ಕೆ ಕಾರಣವಾಗಿದ್ದು ಅನೇಕ ಸ್ಟಾರ್ಟಪ್ ಗಳನ್ನು ಚಿಂತೆಗೀಡು ಮಾಡಿದೆ. ಈ ಕುರಿತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದು ಬಿಕ್ಕಟ್ಟಿನ ಕುರಿತು ಸರ್ಕಾರದ ಸಹಾಯ ಇತ್ಯಾದಿಗಳ ಕುರಿತು ಚರ್ಚಿಸಲು ನವೋದ್ದಿಮೆಗಳ ಸಂಸ್ಥಾಪಕರು ಹಾಗು ಸಿಇಒಗಳೊಂದಿಗೆ ಸಭೆ ನಡೆಸುವುದಾಗಿ ಭಾನುವಾರ ಹೇಳಿದ್ದಾರೆ.
ಅನೇಕ ಭಾರತೀಯ ನವೋದ್ದಿಮೆಗಳೂ ಕೂಡ ಸಿಲಿಕಾನ್ ವ್ಯಾಲಿ ಬ್ಯಾಂಕಿನಲ್ಲಿ ಹಣವನ್ನು ತೊಡಗಿಸಿದ್ದು ಬ್ಯಾಂಕ್‌ನ ಕುಸಿತವು ಭಾರತದಲ್ಲಿನ ಹಲವಾರು ಸ್ಟಾರ್ಟ್‌ಅಪ್‌ಗಳ ಮೇಲೆ ಪರಿಣಾಮ ಬೀರಲಿದೆ. ಜಾಗತಿಕ ಸಾಫ್ಟ್‌ವೇರ್-ಆಸ್-ಎ-ಸರ್ವಿಸ್ (SaaS) ಆಧಾರಿತ ಮಾರುಕಟ್ಟೆ ಗುಪ್ತಚರ ಪ್ಲಾಟ್‌ಫಾರ್ಮ್ Tracxn ನ ಇತ್ತೀಚಿನ ಮಾಹಿತಿಯ ಪ್ರಕಾರ, SVB ಭಾರತದಲ್ಲಿ ಕನಿಷ್ಠ 21 ಸ್ಟಾರ್ಟ್‌ಅಪ್‌ಗಳೊಂದಿಗೆ ಸಂಬಂಧ ಹೊಂದಿದೆ. ಆದರೆ ಈ ಇವುಗಳ ಹೂಡಿಕೆಯೆಷ್ಟಿದೆ ಎಂಬುದು ಬಂಹಿರಂಗಪಡಿಸಿಲ್ಲ.
“ಈ ಸಂದರ್ಭದಲ್ಲಿ ಬಿಕ್ಕಟ್ಟು ಸ್ಟಾರ್ಟಪ್ ಗಳ ಮೇಲೆ ಬೀರುವ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಮತ್ತು ನರೇಂದ್ರ ಮೋದಿ ಸರ್ಕಾರವು ಅವರಿಗೆ ಹೇಗೆ ಸಹಾಯ ಮಾಡಬೇಕು ಎಂಬುದನ್ನು ಅರಿತುಕೊಳ್ಳಲು ಮುಂದಿನ ವಾರ ಭಾರತೀಯ ಸ್ಟಾರ್ಟ್‌ಅಪ್‌ಗಳನ್ನು ಭೇಟಿಯಾಗುತ್ತೇನೆ” ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.