ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಪ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಸಂಗೀತ ಕಾರ್ಯಕ್ರಮ ನೀಡಲು ತೆರಳಿದ್ದ ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ವೇದಿಕೆಯಲ್ಲಿ ಪ್ರೇಕ್ಷಕರ ಎದುರು ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ಸದ್ಯ ಅವರು ಪ್ರೇಕ್ಷಕರಲ್ಲಿ ಕ್ಷಮೆ ಕೋರಿ ವೇದಿಕೆಯಲ್ಲೇ ಭಾವುಕರಾಗಿ ಅಳುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ
ಇದಕ್ಕೆ ಕಾರಣ ನೆರೆದಿದ್ದವರು ಗೋಬ್ಯಾಕ್ ಎಂಬ ಧ್ವನಿ ಏರಿಸಿದ್ದು, ಇದರಿಂದ ಬೇಸರಗೊಂಡು ನೇಹಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಕಾನ್ಸರ್ಟ್ ಗೆ ನೇಹಾ ಕಕ್ಕರ್ ಸುಮಾರು 3 ಗಂಟೆ ತಡವಾಗಿ ಆಗಮಿಸಿದರು. ಇದರಿಂದ ಅಸಮಾಧಾನಗೊಂಡಿದ್ದ ನೂರಾರು ಪ್ರೇಕ್ಷಕರು ಗೋಬ್ಯಾಕ್ ಎಂದು ಧ್ವನಿ ಏರಿಸಿದ್ದಾರೆ. ಈ ವೇಳೆ ಕ್ಷಮೆ ಕೋರಿ ನೇಹಾ ಭಾವುಕರಾಗಿ ಅತ್ತೇ ಬಿಟ್ಟಿದ್ದಾರೆ.
ತಡವಾಗಿ ಆಗಮಿಸಿದ ನೇಹಾ ಅವರನ್ನು ಕಂಡು ಪ್ರೇಕ್ಷಕರು ಗಟ್ಟಿಯಾಗಿ ಕೂಗಿದ್ದು, ಈ ವೇಳೆ ಅಳುತ್ತಲೇ ಮಾತನಾಡಿದ ಅವರು, ತಡವಾಗಿದ್ದಕ್ಕೆ ಕ್ಷಮೆ ಇರಲಿ ಎಂದರು. ನೀವು ನಿಜಕ್ಕೂ ಉತ್ತಮ ವ್ಯಕ್ತಿಗಳು. ಇಷ್ಟು ಹೊತ್ತು ತಾಳ್ಮೆಯಿಂದ ಕಾದಿದ್ದೀರಿ. ಸುಮಾರು ಹೊತ್ತಿನಿಂದ ಇಲ್ಲಿದ್ದೀರಿ. ಇನ್ನು ಮುಂದೆ ಯಾರನ್ನೂ ಕಾಯಿಸುವುದಿಲ್ಲ. ಇಷ್ಟು ತಡವಾಗಿದ್ದಕ್ಕೆ ಕ್ಷಮಿಸಿ. ಈ ಕಾರ್ಯಕ್ರಮವನ್ನು ಎಂದಿಗೂ ಮರೆಯಲಾರೆ ಎಂದು ನೇಹಾ ಹೇಳಿದ್ದಾರೆ.
ಇನ್ನು ನೇಹಾ ಅಳುತ್ತಾ ಕ್ಷಮೆ ಕೇಳಿದಾಗ ಪ್ರೇಕ್ಷಕರ ಪೈಕಿ ಕೆಲವರು ಕ್ಷಮಿಸಿದ್ದಾರೆ. ಆದರೆ ಹಲವರು ಗೋಬ್ಯಾಕ್ ಎಂದು ಅಸಮಾಧಾನದಿಂದ ಕೂಗಿದ್ದಾರೆ.
ʼಇದು ಭಾರತ ಅಲ್ಲ. ನೀವು ಆಸ್ಟ್ರೇಲಿಯಾದಲ್ಲಿದ್ದೀರಿ ಎನ್ನುವುದು ನೆನಪಿರಲಿʼ ಎಂದು ಟೀಕಿಸಿದ್ದಾರೆ. ಮಗದೊಬ್ಬರು, ‘ನಿಮ್ಮ ನಟನೆ ಚೆನ್ನಾಗಿದೆ. ಇದು ಇಂಡಿಯನ್ ಐಡಲ್ ಶೋ ಅಲ್ಲ. ಅಲ್ಲಿ ಮಕ್ಕಳನ್ನು ಸಂಭಾಳಿಸಿದಂತೆ ಇಲ್ಲಿ ನಮ್ಮ ಮುಂದೆ ನಾಟಕ ಮಾಡಬೇಡಿ’ ಎಂದು ವ್ಯಂಗ್ಯವಾಡಿರುವುದು ವೈರಲ್ ವಿಡಿಯೊದಲ್ಲಿ ಸೆರೆಯಾಗಿದೆ.
ವಿಡಿಯೊ ನೋಡಿದ ನೆಟ್ಟಿಗರು ಈ ಬಗ್ಗೆ ಪರ-ವಿರೋಧ ಚರ್ಚೆ ಆರಂಭಿಸಿದ್ದಾರೆ. ‘ತಡವಾಗಿ ಬಂದರೂ ಸುಮಾರು 2.30 ಗಂಟೆಗಳ ಕಾಲ ಪ್ರದರ್ಶನ ನೀಡಿದ್ದಾರೆʼ ಎಂದು ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.