ಐಸಿಸಿ ಅಂಗಳ ತಲುಪಿದ ಸಿರಾಜ್‌ -ಹೆಡ್‌ ವಾಗ್ವಾದ: ಶಿಕ್ಷೆ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ಸ್ಟಾರ್‌ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಹಾಗೂ ಟೀಂ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್‌ ನಡುವಿನ ವಾಗ್ದಾದ ಐಸಿಸಿ ಅಂಗಳ ತಲುಪಿದೆ.

ಇದೀಗ ಈ ಇಬ್ಬರ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕ್ರಮ ಕೈಗೊಂಡಿದೆ. ಆದರೆ ಐಸಿಸಿ ವಿಧಿಸಿರುವ ಈ ಶಿಕ್ಷೆಯಲ್ಲಿ ಮತ್ತೆ ತಾರತಮ್ಯ ಕಂಡುಬಂದಿದ್ದು, ಮೊಹಮ್ಮದ್ ಸಿರಾಜ್​ಗೆ ಮಾತ್ರ ದಂಡದ ಜೊತೆಗೆ ಡಿಮೆರಿಟ್ ಅಂಕಗಳನ್ನು ನೀಡಿದ್ದರೆ, ಹೆಡ್‌ಗೆ ಕೇವಲ ಡಿಮೆರಿಟ್ ಅಂಕಗಳನ್ನು ಮಾತ್ರ ಶಿಕ್ಷೆಯಾಗಿ ನೀಡಿದೆ.

ಐಸಿಸಿ ಈ ಕ್ರಮಕ್ಕೆ ಕಾರಣವೇನು?
ವಾಸ್ತವವಾಗಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಡಿಲೇಡ್ ಓವಲ್‌ನಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯಿತು. ಈ ಪಂದ್ಯದ ಎರಡನೇ ದಿನ, ಮೊದಲ ಇನ್ನಿಂಗ್ಸ್​ ಆಡುತ್ತಿದ್ದ ಆಸ್ಟ್ರೇಲಿಯಾ ತಂಡದ ಪರ ಟ್ರಾವಿಸ್ ಹೆಡ್ ಸ್ಫೋಟಕ ಶತಕ ಗಳಿಸಿದ್ದರು. ತನ್ನ ಹೊಡಿಬಡಿ ಆಟದಿಂದ ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿದ್ದ ಹೆಡ್​ ಭಾರತದ ಪ್ರತಿಯೊಬ್ಬ ಬೌಲರ್‌ಗಳನ್ನು ದಂಡಿಸಲಾರಂಭಿಸಿದ್ದರು. . ಇದೇ ವೇಳೆ ಸಿರಾಜ್ ಬೌಲ್ ಮಾಡಿದ ಒಂದು ಓವರ್‌ನಲ್ಲಿ ಹೆಡ್ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ್ದರು. ಆದರೆ ಅದೇ ಓವರ್‌ನಲ್ಲಿ ಸಿರಾಜ್, ಹೆಡ್​ರನ್ನು ಕ್ಲೀನ್ ಬೌಲ್ಡ್ ಮಾಡಿದ​ರು.

ಹೆಡ್​ರನ್ನು ಔಟ್ ಮಾಡಿದ ತಕ್ಷಣ ಸಿರಾಜ್ ಜೋರಾಗಿ ಕೂಗಾಡುತ್ತಾ ಸಿಟ್ಟಿನಿಂದ ಸಂಭ್ರಮಿಸತೊಡಗಿದರು. ಈ ವೇಳೆ ಟ್ರಾವಿಸ್ ಹೆಡ್ ಕೂಡ ಸಿರಾಜ್​ಗೆ ಏನನ್ನೋ ಹೇಳಿದರು. ಅದಕ್ಕೆ ಉತ್ತರವಾಗಿ ಇನ್ನಷ್ಟು ಕೆರಳಿದ ಸಿರಾಜ್, ಪೆವಿಲಿಯನ್​ಗೆ ಹೋಗುವಂತೆ ಹೆಡ್​ಗೆ ಕೈ ಸನ್ನೆ ಮಾಡಿದರು. ಇದನ್ನು ಸಹಿಸಿಕೊಳ್ಳದ ಹೆಡ್​, ಸಿರಾಜ್​ಗೆ ಮತ್ತೆ ಏನನ್ನೋ ಹೇಳಿದ್ದರು. ಪಂದ್ಯ ಮುಗಿದ ಬಳಿಕವೂ ಈ ಇಬ್ಬರು ಆಟಗಾರರಿಂದ ಹೇಳಿಕೆ ಪ್ರತಿ ಹೇಳಿಕೆಗಳು ಹೊರಬಿದ್ದಿದ್ದವು. ದಿನದಾಟ ಮುಗಿದ ಬಳಿಕ ಈ ಬಗ್ಗೆ ಮಾತನಾಡಿದ್ದ ಹೆಡ್​, ನಾನು ಸಿರಾಜ್​ಗೆ ಉತ್ತಮವಾಗಿ ಬೌಲ್ ಮಾಡಿದೆ ಎಂದಷ್ಟೇ ಹೇಳಿದೆ. ಆದರೆ ಅವರು ಅದನ್ನು ತಪ್ಪಾಗಿ ಅರ್ಥೈಸಿಕೊಂಡರು ಎಂದಿದ್ದರು. ಇನ್ನು ಮೂರನೇ ದಿನದಾಟದ ಆರಂಭದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿರಾಜ್, ಹೆಡ್ ಸುಳ್ಳು ಹೇಳುತ್ತಿದ್ದಾರೆ. ನನ್ನನ್ನು ಹೊಗಳುವ ರೀತಿಯಲ್ಲಿ ಅವರ ಪ್ರತಿಕ್ರಿಯೆ ಇರಲಿಲ್ಲ ಎಂದಿದ್ದರು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಐಸಿಸಿ ಇಬ್ಬರ ವಿರುದ್ಧ ಕ್ರಮ ಕೈಗೊಂಡಿದೆ.

ಶಿಕ್ಷೆಯಲ್ಲೂ ತಾರತಮ್ಯ ತೋರಿತಾ ಐಸಿಸಿ?
ಇದೀಗ ಪಂದ್ಯ ಮುಗಿದ ಒಂದು ದಿನದ ನಂತರ, ಐಸಿಸಿ ಇಬ್ಬರೂ ಆಟಗಾರರಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಮ್ಯಾಚ್ ರೆಫರಿ ರಂಜನ್ ಮದುಗಲೆ ಅವರು ನೀತಿ ಸಂಹಿತೆಯ ವಿಭಿನ್ನ ಕಲಂಗಳ ಅಡಿಯಲ್ಲಿ ಇಬ್ಬರೂ ಆಟಗಾರರನ್ನು ತಪ್ಪಿತಸ್ಥರೆಂದು ಘೋಷಿಸಿದ್ದಾರೆ ಮತ್ತು ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಔಟಾದ ಬ್ಯಾಟ್ಸ್‌ಮನ್‌ಗೆ ಪ್ರಚೋದನೆ ನೀಡುವಂತಹ ಭಾಷೆ, ಸನ್ನೆ ಅಥವಾ ಕ್ರಿಯೆಯ ಬಳಕೆಗೆ ಸಂಬಂಧಿಸಿದ 2.5 ನೇ ವಿಧಿಯನ್ನು ಉಲ್ಲಂಘಿಸಿದ್ದಕ್ಕಾಗಿ ಸಿರಾಜ್ ತಪ್ಪಿತಸ್ಥರೆಂದು ಕಂಡುಬಂದಿದೆ. ಇದರ ಅಡಿಯಲ್ಲಿ ಸಿರಾಜ್ ಅವರ ಪಂದ್ಯ ಶುಲ್ಕದ ಶೇ.20 ರಷ್ಟು ಕಡಿತಗೊಳಿಸಲಾಗಿದೆ. ಇದಲ್ಲದೇ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.

ಆಶ್ಚರ್ಯವೆಂದರೆ, ಹೆಡ್‌ ಅವರ ಪಂದ್ಯದ ಶುಲ್ಕವನ್ನು ಕಡಿತಗೊಳಿಸಲಾಗಿಲ್ಲ. ಅಂತಾರಾಷ್ಟ್ರೀಯ ಪಂದ್ಯದ ಸಂದರ್ಭದಲ್ಲಿ ಆಟಗಾರ, ಸಹಾಯಕ ಸಿಬ್ಬಂದಿ, ಅಂಪೈರ್ ಅಥವಾ ಮ್ಯಾಚ್ ರೆಫರಿ ವಿರುದ್ಧ ನಿಂದನೀಯ ಭಾಷೆಯ ಬಳಕೆಯನ್ನು ವ್ಯವಹರಿಸುವ ಆರ್ಟಿಕಲ್ 2.13 ರ ಅಡಿಯಲ್ಲಿ ಹೆಡ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ಶಿಕ್ಷೆಯಾಗಿ, ಹೆಡ್​ಗೆ ಕೇವಲ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

ಕಳೆದ 24 ತಿಂಗಳಲ್ಲಿ ಇಬ್ಬರೂ ಆಟಗಾರರಿಗೆ ಇದು ಮೊದಲ ಡಿಮೆರಿಟ್ ಪಾಯಿಂಟ್ ಆಗಿದೆ. ಹೀಗಾಗಿ ಈ ಇಬ್ಬರೂ ಪಂದ್ಯದಿಂದ ನಿಷೇಧಕ್ಕೊಳಗಾಗುವುದರಿಂದ ಪಾರಾಗಿದ್ದಾರೆ. ಆದಾಗ್ಯೂ ಐಸಿಸಿ ನೀಡಿರುವ ದಂಡದಲ್ಲಿ ಸಿರಾಜ್​ಗೆ ಅನ್ಯಾಯವಾಗಿದೆಯಾ ಎಂಬ ಪ್ರಶ್ನೆ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಮೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!