ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿಕಪ್ ವ್ಯಾನ್‌ಗೆ ಸಿಮೆಂಟ್ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಮಿಡ್ನಾಪುರದ ಖರಗ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬುರಮಲಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ.
ಮುಂಜಾನೆ ಬುರಮಳದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪಿಕಪ್ ವ್ಯಾನ್‌ಗೆ 10-12 ಕಾರ್ಮಿಕರು ಹೂ ತುಂಬುವ ಕೆಲಸ ಮಾಡುತ್ತಿದ್ದರು. ಈ ವೇಳೆ, ಏಕಾಏಕಿ ಸಿಮೆಂಟ್ ತುಂಬಿದ್ದ ಲಾರಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮತ್ತೊಬ್ಬರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ಕೂಡಲೇ ಪೊಲೀಸರು ಮತ್ತು ಆಡಳಿತದವರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಮೃತರಲ್ಲಿ ಕೆಲವರ ಶವಗಳನ್ನು ಈಗಾಗಲೇ ಖರಗ್‌ಪುರ ಆಸ್ಪತ್ರೆಗೆ ಮತ್ತು ಇತರರನ್ನು ಮರಣೋತ್ತರ ಪರೀಕ್ಷೆಗಾಗಿ ಮೇದಿನಿಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಮೃತರೆಲ್ಲರೂ ಖರಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮುಕ್ಸುದ್‌ಪುರ ಪ್ರದೇಶದ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನೆಯ ಕುರಿತಾಗಿ ಪೊಲೀಸರು ತನಿಖೆ ಕೈಗೆತ್ತುಕೊಂಡಿದ್ದಾರೆ.