ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಆರು ಭಾರತೀಯರು ಸೇರಿದಂತೆ 17 ಮಂದಿ ಮೃತಪಟ್ಟಿರುವ ದುರಂತ ಘಟನೆ ಮೆಕ್ಸಿಕೋದಲ್ಲಿ ಗುರುವಾರ ನಡೆದಿದೆ.
ಮೆಕ್ಸಿಕೋ ನಗರದಿಂದ ಈಶಾನ್ಯ ಪ್ರಾಂತ್ಯವಾದ ಟಿಜುವಾನಾಗೆ ಬಸ್ ತೆರಳುವ ವೇಳೆ ಈ ಅಚಾತುರ್ಯ ಸಂಭವಿಸಿದೆ. ಬಸ್ಸಿನಲ್ಲಿ ವಿದೇಶಿ ವಲಸಿಗರು ಮತ್ತು ಸ್ಥಳೀಯರು ಸೇರಿದಂತೆ ಒಟ್ಟು 40 ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ ಆರು ಭಾರತೀಯರು ಸೇರಿ 17 ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಅತೀ ವೇಗವಾಗಿ ಬಸ್ ಚಲಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೃತಪಟ್ಟವರ ಪೈಕಿ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ವಿವರವನ್ನು ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.