ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾದ ದಾರುಣ ಘಟನೆ ಹರ್ಯಾಣದ ಪಾಣಿಪತ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಪಾಣಿಪತ್‌ನ ತಹಸಿಲ್ ಕ್ಯಾಂಪ್‌ನಲ್ಲಿರುವ ರಾಧಾ ಫ್ಯಾಕ್ಟರಿ ಬಳಿಯ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಸ್ಫೋಟದ ವೇಳೆ ಮನೆಯಲ್ಲಿದ್ದ ಪತಿ ಪತ್ನಿ ಹಾಗೂ ನಾಲ್ವರು ಮಕ್ಕಳು ಸಜೀವ ದಹನವಾಗಿದ್ದಾರೆ. ಬೆಂಕಿ ವೇಗವಾಗಿ ವ್ಯಾಪಿಸಿದ್ದರಿಂದ ಮನೆಯಲ್ಲಿದ್ದವರಿಗೆ ಹೊರಗೆ ಬರಲು ಅವಕಾಶವಿರಲಿಲ್ಲ. ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಸಂದರ್ಭದಲ್ಲಿ ಭಾರೀ ಸದ್ದಿಗೆ ಸುತ್ತಮುತ್ತಲಿನ ಜನರು ಮನೆಯಿಂದ ಓಡಿ ಬಂದಿದ್ದಾರೆ. ಬೆಂಕಿಯಲ್ಲಿ ಸಜೀವ ದಹನವಾದವರ ದೇಹಗಳು ಗುರುತು ಸಿಗದಂತೆ ಬದಲಾಗಿವೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತರಲ್ಲಿ ಪತಿ-ಪತ್ನಿ, ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ಸೇರಿದ್ದಾರೆ. ಅಬ್ದುಲ್ ಕರೀಂ (50), ಅವರ ಪತ್ನಿ ಅಪ್ರೋಜಾ (46), ಹಿರಿಯ ಮಗಳು ಇಶ್ರತ್ ಖಾತುನ್ (17), ರೇಷ್ಮಾ (16), ಅಬ್ದುಲ್ ಶಕೂರ್ (10) ಮತ್ತು ಅಫಾನ್ (7) ಎಂದು ಗುರುತಿಸಲಾಗಿದೆ. ಅಬ್ದುಲ್ ಕರೀಂ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ನಿವಾಸಿ. ಪ್ರಸ್ತುತ ಕುಟುಂಬವು ಕೆಸಿ ಚೌಕ್, ಬಧ್ವರಾಮ್ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.