ಮುಖ್ಯಮಂತ್ರಿ ಮುಂದೆ ಶರಣಾದ ಆರು ನಕ್ಸಲರು: ಮುಂದಿನ ಪ್ರಕ್ರಿಯೆ ಏನೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿ ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿ ಆರು ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಬುಧವಾರ ಶರಣಾದರು.

ಮುಂಡಗಾರು ಲತಾ ನೇತೃತ್ವದಲ್ಲಿ ಆರು ಮಂದಿ ನಕ್ಸಲರರು ಬಂದೂಕಿನ ಹಾದಿಯನ್ನು ತೊರೆದು ಪ್ರಜಾಸತ್ತಾತ್ಮಕ ಹಾದಿಯನ್ನು ತುಳಿಯುವ ಉದ್ದೇಶದಿಂದ ಶರಣಾಗಿದ್ದಾರೆ. ಈ ಮೊದಲು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಕ್ಸಲರು ಶರಣಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊನೆಯಗಳಿಗೆಯಲ್ಲಿ ಬದಲಾವಣೆಗೊಂಡು ಚಿಕ್ಕಮಗಳೂರಿನಿಂದ ನೇರವಾಗಿ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ನಕ್ಸಲರು ಶರಣಾಗತರಾದರು.

ಈ ಮೂಲಕ ಶೃಂಗೇರಿ ತಾಲೂಕು ಮುಂಡಗಾರು ಲತಾ, ದಕ್ಷಿಣ ಕನ್ನಡ ಜಿಲ್ಲೆ ಕುತ್ಲೂರಿನ ಸುಂದರಿ, ಬಾಳೆಹೊಳೆಯ ವನಜಾಕ್ಷಿ, ಆಂಧ್ರ ಪ್ರದೇಶದ ಮಾರೆಪ್ಪ ಅರೋಲಿ ಅಲಿಯಾಸ್ ಜಯಣ್ಣ, ತಮಿಳುನಾಡಿನ ಕೆ.ವಸಂತ, ಕೇರಳದ ಟಿ.ಎನ್.ಜೀಶ ಶರಣಾಗಿ ಸಮಾಜದ ಮುಖ್ಯವಾಹಿನಿ ಸೇರಿದ್ದಾರೆ.

ಬಾಳೆಹೊನ್ನೂರಿನಿಂದ ಹಾಸನ ಮಾರ್ಗವಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಚನ್ನರಾಯಪ್ಪಟ್ಟಣ, ಹಿರಿಸಾವೆ ಮೂಲಕ ಬೆಂಗಳೂರಿಗೆ 6 ನಕ್ಸಲರನ್ನು ಕರೆದುಕೊಂಡು ಬರಲಾಗಿತ್ತು. ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾಗೆ ಸಂಜೆ 6 ಗಂಟೆಗೆ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಗೂ ಬೇಕಿದ್ದಂತ ಮೋಸ್ಟ್ ವಾಂಟೆಂಡ್ 6 ನಕ್ಸಲರು ಆಗಮಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ನಕ್ಸಲರು, ಆ ಬಳಿಕ ಅವರ ಸಮ್ಮುಖದಲ್ಲಿ ಶರಣಾಗತಿಯಾದರು. ಸಿಎಂ ಸಿದ್ದರಾಮಯ್ಯ ಅವರು ಶರಣಾಗತಿಯಾದಂತಹ 6 ನಕ್ಸಲರಿಗೆ ಭಾರತದ ಸಂವಿಧಾನ ಪುಸ್ತಕ, ಗುಲಾಬಿ ಹೂ ನೀಡಿ ಸಾರ್ವಜನಿಕ ಬದುಕಿಗೆ ಬರ ಮಾಡಿಕೊಂಡರು. ಈ ವೇಳೆ ತಮ್ಮನ್ನು ಸಮಾಜದ ಮುಖ್ಯವಾಹಿನಿಗೆ ಸ್ವಾಗತಿಸಿದ ಮುಖ್ಯಮಂತ್ರಿಗಳಿಗೆ ನಕ್ಸಲರು ಅಭಿನಂದನೆ ಸಲ್ಲಿಸಿದರು.

ಮುಂದಿನ ಪ್ರಕ್ರಿಯೆ ಏನು?
ಶರಣಾಗತರಾದ ನಕ್ಸಲರ ವಿರುದ್ಧ ಇರುವ ಘೋರ ಅಪರಾಧಗಳ ಕಾನೂನು ಪ್ರಕ್ರಿಯೆ ನ್ಯಾಯಾಲಯದಲ್ಲಿ ಮುಂದುವರಿಯುತ್ತವೆ. ರಾಜ್ಯ ಸರ್ಕಾರವು ಸರಿಯಾದ ಕಾರ್ಯ ವಿಧಾನಗಳ ಮೂಲಕ ಶರಣಾದ ನಕ್ಸಲರ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ಹಿಂಪಡೆಯಲು ಪರಿಗಣಿಸಬಹುದು. ಶರಣಾದ ನಕ್ಸಲರಿಗೆ ಉಚಿತ ಕಾನೂನು ಸಹಕಾರ ನೀಡಲು ವಕೀಲರನ್ನು ಒದಗಿಸಬಹುದು. ಅಲ್ಲದೆ ತ್ವರಿತ ವಿಚಾರಣೆಗಾಗಿ ತ್ವರಿತಗತಿ ನ್ಯಾಯಾಲಯ ರಚನೆ ಮಾಡಲು ಸರ್ಕಾರಕ್ಕೆ ಅವಕಾಶ ಇದೆ.

ಈ ಮಾಹಿತಿಯನ್ನು ನೀಡಬೇಕಿದೆ
ನಕ್ಸಲ್ ಶರಣಾಗತಿ ನಿಯಮಾವಳಿ ಪ್ರಕಾರ ಶರಣಾಗತರಾದ ನಕ್ಸಲರು ನನ್ನ ನಿಜವಾದ ಹೆಸರು, ಗುರುತು, ಚಟುವಟಿಕೆ, ಕ್ರಿಯಾಶೀಲವಾಗಿದ್ದ ಸಂಘಟನೆಯ ಹೆಸರು, ಶಸ್ತ್ರಾಸ್ತ್ರ ಸರಬರಾಜು ಮೂಲದ ಬಗ್ಗೆ ಮಾಹಿತಿ ನೀಡಬೇಕು ಎಂದಿದೆ.

ಅಲ್ಲದೆ ಸಂಘಟನೆಗೆ ಹಣಕಾಸು ನೆರವು ಒದಗಿಸುವವರ ಬಗ್ಗೆ ಮತ್ತು ಕೊರಿಯರ್‌ಗಳ ಮೂಲದ ಬಗ್ಗೆ ಮಾಹಿತಿ ಕೊಡಬೇಕು ಎಂದಿದೆ.

ಹಿಂದೆ ಎಸಗಿದ್ದ ಕ್ರಿಮಿನಲ್ ಅಪರಾಧಗಳ ಮಾಹಿತಿ, ಭಾಗಿಯಾದವರ ವಿವರ, ಯೋಜಿಸದವರ ವಿವರ, ಬಳಸಿದ ಆಯುಧಗಳ ಮಾಹಿತಿಯನ್ನು ನೀಡಬೇಕಿದೆ.

ಅಷ್ಟೇ ಅಲ್ಲದೆ, ಮಾಧ್ಯಮಗಳ ಮುಂದೆ ತಾನಾಗಿಯೇ ಸ್ವ ಇಚ್ಛೆಯಿಂದ ಶರಣಾಗುತ್ತಿದ್ದೇನೆ ಎಂದು ಹೇಳಿಕೆ ನೀಡಬೇಕಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!