October 11, 2026
Sunday, October 11, 2026
spot_img

ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ ಅಸ್ತಿಪಂಜರ ಪತ್ತೆ ಪ್ರಕರಣ: ಗುರುತು ಪತ್ತೆ ಕಾರ್ಯಕ್ಕೆ ವೇಗ ನೀಡಿದ ಎಸ್‌ಐಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಪತ್ತೆಯಾಗಿದ್ದ ಏಳು ಅಸ್ಥಿಪಂಜರಗಳ ಗುರುತು ಪತ್ತೆ ಕಾರ್ಯವನ್ನು ವಿಶೇಷ ತನಿಖಾ ತಂಡ ತೀವ್ರಗೊಳಿಸಿದೆ. ತನಿಖೆಯ ಭಾಗವಾಗಿ ಧರ್ಮಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಪತ್ತೆಯಾಗಿರುವವರ ಮಾಹಿತಿಯನ್ನು ಎಸ್‌ಐಟಿ ಸಂಗ್ರಹಿಸುತ್ತಿದ್ದು, ಇದರ ಜೊತೆಗೆ ಕೇರಳ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಲ್ಲೂ ನಾಪತ್ತೆಯಾದವರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಮೃತರ ಗುರುತು ಪತ್ತೆಗಾಗಿ ಈಗಾಗಲೇ ಎಂಟು ಕುಟುಂಬಗಳ ಸದಸ್ಯರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇನ್ನೂ 9 ಕುಟುಂಬಗಳ ಮಾದರಿಗಳನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಡಿಎನ್‌ಎ ಪರೀಕ್ಷೆಯ ಮೂಲಕ ಅಸ್ಥಿಪಂಜರಗಳು ಯಾರಿಗೆ ಸೇರಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನ ಕೂಡಾ ನಡೆಯುತ್ತಿದೆ.

ಕಳೆದ ವರ್ಷದ ಸೆ.17 ಮತ್ತು 18ರಂದು ಬಂಗ್ಲೆಗುಡ್ಡೆ ಪ್ರದೇಶದಲ್ಲಿ ನಡೆದ ಶೋಧ ಕಾರ್ಯಾಚರಣೆಯ ವೇಳೆ ಈ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಆದರೆ ಅವು ಯಾರದ್ದು, ಸಾವಿಗೆ ಕಾರಣವೇನು ಮತ್ತು ಪ್ರಕರಣದ ಹಿನ್ನೆಲೆ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಸ್ಥಿಪಂಜರಗಳ ಡಿಎನ್‌ಎ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ವರದಿ ಬಂದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

Must Read