ಹೊಸದಿಗಂತ ಹುಬ್ಬಳ್ಳಿ:
ಬೀದರನಲ್ಲಿ ಎಟಿಎಂ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ, ಕೊಲೆಗೈದು ದರೋಡೆ ಮಾಡಿದ ಘಟನೆ ಸಣ್ಣ ಪ್ರಕರಣವಾಗಿದೆ. ರಾಜ್ಯದಲ್ಲಿ ಪ್ರತಿದಿನ ಇಂತಹ ಪ್ರಕರಣಗಳು ನಡೆಯುತ್ತವೆ. ಅದಕ್ಕೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರೋಡೆ ಪ್ರಕರಣವನ್ನು ಮೊದಲು ಸಣ್ಣ ಪ್ರಕರಣ ಎಂದು ಹೇಳಿಕೆ ನೀಡಿದ ಸಚಿವ ಸಂತೋಷ ಲಾಡ್, ಬಳಿಕ ಸಣ್ಣ ಪುಟ್ಟ ಪ್ರಕರಣದಂತೆ ಇದು ಸಹ ನಡೆದಿದೆ. ಈ ಪ್ರಕರಣವನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಎಲ್ಲ ಸರ್ಕಾರದಲ್ಲಿಯೂ ಸಹ ಅಪರಾಧಗಳು ನಡೆಯುತ್ತವೆ ಎಂದು ಸಮರ್ಥಿಸಿಕೊಂಡರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಉತ್ತರ ನನ್ನಲ್ಲಿ ಇಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದ್ದು, ಅರವನ್ನು ಪ್ರಶ್ನೆ ಮಾಡಬೇಕು. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಅಧ್ಯಕ್ಷರ ಬದಲಾವಣೆಯ ಬಗ್ಗೆ ಸತೀಶ ಜಾರಕಿಹೊಳಿ ಮಾತನಾಡಿದ್ದು, ಅವರನೇ ಪ್ರಶ್ನೆ ಮಾಡಿ. ಅದು ಅವರ ವಯಕ್ತಿಕ ಅಭಿಪ್ರಾಯ. ಸರ್ಕಾರ ಹಾಗೂ ಪಕ್ಷಕ್ಕೆ ಯಾವುದೇ ಅಂತರವಿಲ್ಲ. ಯಾರು ಸಿಎಂ ಆಗಬೇಕು ಎಂಬುವ ವಿಚಾರಕ್ಕೆ ಉತ್ತರ ನೀಡಲು ಆಗುವುದಿಲ್ಲ ಎಂದು ಹೇಳಿದರು.