ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಭಾರೀ ಮತಗಳ ಅಂತರದಿಂದ ಕಾಂಗ್ರೆಸ್ ನ ಕಿಶೋರಿ ಲಾಲ್ ಶರ್ಮಾ ಸೋಲಿಸಿದ್ದಾರೆ.
ಇತ್ತ ಅಚ್ಚರಿಯ ಗೆಲುವಿನಿಂದ ಭಾರಿ ಖುಷಿಗೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಿಶೋರಿ ಲಾಲ್ ಶರ್ಮಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ದೇಶದಲ್ಲೇ ಅತೀಹೆಚ್ಚು ಜನರ ಗಮನವನ್ನು ಸೆಳೆದ ಕ್ಷೇತ್ರ ಎಂದರೆ ಅದು ಅಮೇಥಿ. ಇಲ್ಲಿ ಚುನಾವಣಾ ಸಮೀಕ್ಷೆಗಳೆಲ್ಲವೂ ಸ್ಮತಿ ಇರಾನಿ ಅವವರ ಗೆಲುವನ್ನೇ ಸೂಚಿಸಿದ್ದವು. ಆದರೆ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ನಿರೀಕ್ಷಿಸದ ಅಂತರದಿಂದ ಇಲ್ಲಿ ಗೆದ್ದು ಬಂದು ಅಚ್ಚರಿ ಮೂಡಿಸಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಇಲ್ಲಿ ಕಿಶೋರಿ ಗೆಲುವು ಸಾಧಿಸಿದ್ದು, ಇದು ಸ್ವತಃ ಕಾಂಗ್ರೆಸ್ ನಾಯಕರಿಗೂ ಅಚ್ಚರಿ ಮೂಡಿಸಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅಭಿನಂದನೆ
ಸ್ವತಃ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಿಶೋರಿ ಲಾಲ್ ಶರ್ಮಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ, ಕಿಶೋರಿ ಭಯ್ಯಾ, ನನಗೆ ಯಾವುದೇ ಸಂಶಯವಿರಲಿಲ್ಲ, ನನಗೆ ಆರಂಭದಿಂದಲೂ ನೀವು ಗೆದ್ದೆ ಗೆಲ್ಲುವಿರಿ ಎಂಬ ವಿಶ್ವಾಸವಿತ್ತು. ನಿಮ್ಮ ಗೆಲುವಿಗೆ ಹಾಗೂ ಅಮೇಥಿಯ ನನ್ನ ಸೋದರ ಸೋದರಿಯೆರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಕಳೆದ ಬಾರಿ ಅಮೇಥಿಯಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿದ ಸ್ಮೃತಿ ಇರಾನಿ ಬಳಿಕ ಕೇಂದ್ರ ಸಚಿವೆಯಾಗಿದ್ದರು. ಆದರೆ ಚುನಾವಣೆಗೆ ಕಿಶೋರಿ ಶರ್ಮಾ ಅವರು ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಾಗ ಅವರೊಬ್ಬ ಸ್ಪರ್ಧೆ ನೀಡದ ಸಾಮಾನ್ಯ ಅಭ್ಯರ್ಥಿ ಎಂದೇ ಭಾವಿಸಲಾಗಿತ್ತು. ಇದಕ್ಕೆ ತಕ್ಕಂತೆ ಸಮೀಕ್ಷೆಗಳು ಕೂಡ ಸ್ಮೃತಿ ಇರಾನಿ ಗೆಲುವನ್ನೇ ಸಾರಿ ಹೇಳಿದ್ದವು. ಆದರೆ ಅವರ ಭಾರಿ ಅಂತರದ ಗೆಲುವು ಈಗ ಬಿಜೆಪಿಗೆ ಶಾಕ್ ನಿಡಿದೆ.