ಅತಿರಸ ಎನ್ನುವುದು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಮತ್ತು ಸಾಂಪ್ರದಾಯಿಕ ಹಬ್ಬದ ಸಿಹಿಯಾಗಿದ್ದು, ಇದನ್ನು ಮುಖ್ಯವಾಗಿ ಅಕ್ಕಿ ಮತ್ತು ಬೆಲ್ಲವನ್ನು ಬಳಸಿ ತಯಾರಿಸಲಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ
ಬೆಲ್ಲ
ಏಲಕ್ಕಿ ಪುಡಿ
ಗಸಗಸೆ ಅಥವಾ ಬಿಳಿ ಎಳ್ಳು
ತುಪ್ಪ
ಎಣ್ಣೆ
ಮಾಡುವ ವಿಧಾನ:
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, ಕನಿಷ್ಠ 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಂತರ ನೆನೆದ ಅಕ್ಕಿಯಿಂದ ನೀರನ್ನು ಸಂಪೂರ್ಣವಾಗಿ ಸೋಸಿ, ಒಂದು ಒಣಗಿದ ಕಾಟನ್ ಬಟ್ಟೆಯ ಮೇಲೆ ಹರವಿ 20-30 ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿ. ಅಕ್ಕಿ ಪೂರ್ತಿ ಒಣಗಬಾರದು, ಕೈಗೆ ಸ್ವಲ್ಪ ತೇವಾಂಶ ಇರಬೇಕು. ಈ ಹದವಾಗಿರುವ ಅಕ್ಕಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿ, ಈ ಹಸಿ ಅಕ್ಕಿ ಹಿಟ್ಟು ಒಣಗದಂತೆ ಒಂದು ಪಾತ್ರೆಯಲ್ಲಿ ಹಾಕಿ ಗಟ್ಟಿಯಾಗಿ ಒತ್ತಿ ಇಡಬೇಕು.
ನಂತರ ಒಂದು ದಪ್ಪ ತಳದ ಪಾತ್ರೆಗೆ ಪುಡಿ ಮಾಡಿದ ಬೆಲ್ಲ ಮತ್ತು ಅರ್ಧ ಕಪ್ ನೀರು ಹಾಕಿ ಬಿಸಿ ಮಾಡಿ. ಬೆಲ್ಲ ಕರಗಿದ ನಂತರ ಅದನ್ನು ಸೋಸಿಕೊಂಡು ಮರಳಿ ಪಾತ್ರೆಗೆ ಹಾಕಿ ಕುದಿಯಲು ಬಿಡಬೇಕು. ಬೆಲ್ಲ ಗಟ್ಟಿಯಾಗುತ್ತಾ ಬರುವಾಗ, ಒಂದು ಬಟ್ಟಲಿನಲ್ಲಿ ನೀರು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಪಾಕವನ್ನು ಹಾಕಿ. ನೀರಿನಲ್ಲಿ ಹಾಕಿದ ಬೆಲ್ಲ ಕರಗದೆ, ಉಂಡೆ ಮಾಡಲು ಬಂದರೆ ಅದು ಅತಿರಸಕ್ಕೆ ಸರಿಯಾದ ಪಾಕ ಎನಿಸಿಕೊಳ್ಳುತ್ತದೆ.
ನಂತರ ಬೆಲ್ಲದ ಪಾಕಕ್ಕೆ ಏಲಕ್ಕಿ ಪುಡಿ ಮತ್ತು ಒಂದು ಚಮಚ ತುಪ್ಪ ಸೇರಿಸಿ ಕೈಯಾಡಿಸಿ. ಬಳಿಕ ಸಿದ್ಧಪಡಿಸಿಟ್ಟುಕೊಂಡ ಹಸಿ ಅಕ್ಕಿ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಗಂಟಿಲ್ಲದಂತೆ ಚೆನ್ನಾಗಿ ಕೈಯಾಡಿಸಬೇಕು. ಈ ಮಿಶ್ರಣದ ಮೇಲೆ ಒಂದು ಚಮಚ ತುಪ್ಪ ಸವರಿ, ಪಾತ್ರೆಯನ್ನು ಮುಚ್ಚಿಡಬೇಕು. ನಂತರ ಒಂದು ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಶೀಟ್‌ಗೆ ಸ್ವಲ್ಪ ತುಪ್ಪ ಸವರಿ, ಹಿಟ್ಟಿನಿಂದ ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿ ಮಧ್ಯಮ ದಪ್ಪಕ್ಕೆ ತಟ್ಟಿ ಕಾಯಿಸಿದ ಎಣ್ಣೆಗೆ ಹಾಕಿ. ಎರಡು ಕಡೆ ಹೊಂಬಣ್ಣ ಬರುವವರೆಗೆ ಮಾಗಿಸಿ ಬೇಯಿಸಿದರೆ. ರುಚಿಕರವಾದ, ಮೃದುವಾದ ಸಾಂಪ್ರದಾಯಿಕ ಅತಿರಸ ಕಜ್ಜಾಯ ಸವಿಯಲು ಸಿದ್ಧ!



