ಸಂಜೆ ಸವಿಯಲು ಗರಿಗರಿಯಾದ ಮತ್ತು ಚುರುಕಲು ಸ್ನ್ಯಾಕ್ಸ್ ಹುಡುಕುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ಮಕ್ಕಳ ಫೇವರಿಟ್ ‘ಕ್ರಿಸ್ಪಿ ಬೋಟಿ ಮಸಾಲಾ ಚಾಟ್’. ರಸ್ತೆ ಬದಿಯ ಗಾಡಿ ಶೈಲಿಯಲ್ಲೇ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಈ ಮಸಾಲಾ ಚಾಟ್ ಒಮ್ಮೆ ತಿಂದರೆ, ಮಕ್ಕಳು ಮತ್ತೆ ಮತ್ತೆ ಬೇಕು ಎನ್ನುತ್ತಾರೆ.
ಬೇಕಾಗುವ ಸಾಮಗ್ರಿಗಳು:
ಬೋಟಿ ಫ್ರೈಯಮ್ಸ್
ಬೇಯಿಸಿದ ಆಲೂಗಡ್ಡೆ
ಈರುಳ್ಳಿ ಮತ್ತು ಟೊಮೆಟೊ
ಹಸಿರು ಚಟ್ನಿ ಮತ್ತು ಸಿಹಿ ಚಟ್ನಿ
ಖಾರದ ಪುಡಿ, ಚಾಟ್ ಮಸಾಲಾ, ಜೀರಿಗೆ ಪುಡಿ
ನೆನೆಸಿ ಬೇಯಿಸಿದ ಹಸಿರು ಬಟಾಣಿ
ಖಾರಾಕಡ್ಡಿ ಮತ್ತು ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
ಮೊದಲಿಗೆ ಎಣ್ಣೆಯನ್ನು ಕಾಯಿಸಿ ಬೋಟಿ ಫ್ರೈಯಮ್ಸ್‌ಗಳನ್ನು ಗರಿಗರಿಯಾಗಿ ಹುರಿದಿಟ್ಟುಕೊಳ್ಳಬೇಕು. ನಂತರ ಒಂದು ತಟ್ಟೆಯಲ್ಲಿ ಈ ಹುರಿದ ಬೋಟಿಗಳನ್ನು ಸ್ವಲ್ಪ ಕೈಯಿಂದ ಪುಡಿ ಮಾಡಿ ಜೋಡಿಸಿ. ಇದರ ಮೇಲೆ ಬಿಸಿಬಿಸಿಯಾದ ಬಟಾಣಿ ಮಸಾಲಾ ಗ್ರೇವಿ ಮತ್ತು ಬೇಯಿಸಿದ ಆಲೂಗಡ್ಡೆ ಚೂರುಗಳನ್ನು ಹಾಕಿ. ನಂತರ ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿರು ಚಟ್ನಿ ಮತ್ತು ಸಿಹಿ ಚಟ್ನಿಯನ್ನು ಹಾಕಿ, ಅದರ ಮೇಲೆ ಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲಾ ಮತ್ತು ಉಪ್ಪನ್ನು ಉದುರಿಸಿ. ಕೊನೆಯದಾಗಿ ಗರಿಗರಿಯಾದ ಸೇವ್ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಬಾಯಲ್ಲಿ ನೀರೂರಿಸುವ ಬೋಟಿ ಮಸಾಲಾ ಚಾಟ್ ಸಿದ್ಧ.



