- ಬಾಳೇಪುಣಿ
ಹೊಸದಿಗಂತ ವರದಿ ಮಂಗಳೂರು:
ಇಬ್ಬರು ಗೆಳೆಯರು ಸುದೀರ್ಘ 50 ವರ್ಷಗಳ ಕಾಲ ಜೊತೆಯಾಗಿ ಓದು, ಉದ್ಯೋಗ ಮತ್ತು ಸಮಾಜ ಸೇವೆಯಲ್ಲಿ ಜೊತೆಗಿದ್ದಾರೆ. ಇವರೇ ದ.ಕ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಬೆಳ್ತಂಗಡಿಯ ಶೀನ ಶೆಟ್ಟಿ ಮತ್ತು ಬಂಟ್ವಾಳದ ಕೃಷ್ಣ ಮೂಲ್ಯ.
ಇಬ್ಬರದ್ದು ಗಾಂಧಿ ಮಾರ್ಗ. ಸಮಾಜ ಸೇವೆಯಲ್ಲಿ ದುಡ್ಡಿಲ್ಲದೆ ಮಾಡುವ ಕೆಲಸಗಳಿಗೆ ಇವರ ಆದ್ಯತೆ. ಸಮಾಜ ಸೇವೆಗೆ ಸಭ್ಯತೆಯ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಮಹಿಳೆಯರು ಮತ್ತು ಸಮಾಜದ ಕಟ್ಟಕಡೆಯ ಜನ-ಸಮುದಾಯ ಇವರ ಟಾರ್ಗೆಟ್ ಗ್ರೂಪ್.
ಸತ್ಯ, ಸರಳತೆ, ಸಮಾನತೆ ಇವರ ಬದುಕಿನ ಸೂತ್ರ! ಸರಕಾರಿ ಹುದ್ದೆಗಳು ಕಾಲಿಗೆ ಎಡವಿದರೂ ನಯವಾಗಿ ತಿರಸ್ಕರಿಸಿ ಸಮಾಜ ಸೇವೆಗೆ ಅರ್ಪಿಸಿಕೊಂಡವರು. ಕೌಟುಂಬಿಕ ಬಂಧನಗಳಿಂದ ದೂರವೇ ಉಳಿದವರು.
‘ಮನಸ್ಸು ಕಟ್ಟುವ ಪ್ರೀತಿ ಹಂಚುವ’ ಇವರ ಸಮಾಜ ಕಾರ್ಯಕ್ಕೆ ವಿಶ್ರಾಂತಿ ಇಲ್ಲ. ಸಾಮಾಜಿಕ ಕಾರ್ಯದಲ್ಲಿ ಜಿಮ್ಮಿಯನ್ ಸೂತ್ರ ಬಳಸಿ ಯಶಸ್ವಿಯಾಗಿದ್ದಾರೆ.
ಇವರ ಸಮಾಜ ಸೇವೆಯ ಜೈತ್ರಯಾತ್ರೆ ಬೆಳ್ತಂಗಡಿಯ ಅಂಡಿಂಜೆ, ನಾವೂರದಿಂದ ಮೊದಲ್ಗೊಂಡು ಮಣಿಪಾಲ, ಕೊಳ್ಳೇಗಾಲ, ಬಿಳಿಗಿರಿರಂಗನ ಬೆಟ್ಟ ದಾಟಿ 1991ರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮುಂದುವರಿದಿದೆ.
ಇವರು ಹುಟ್ಟುಹಾಕಿದ ‘ಜನ ಶಿಕ್ಷಣ ಟ್ರಸ್ಟ್’ ಸಮುದಾಯ, ಸಂಘಟನೆಗಳು, ಸಂಘ ಸಂಸ್ಥೆಗಳು, ಸರಕಾರದ ಇಲಾಖೆಗಳೊಂದಿಗೆ ಕೈಜೋಡಿಸಿ ಜಂಟಿಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತದೆ. ನಿತ್ಯವೂ ಸಮಾಜ-ಸಮುದಾಯದ ನಡುವೆ ಒಂದಲ್ಲ ಒಂದು ರೀತಿಯಲ್ಲಿ ಈ ಜೋಡಿ ಕೆಲಸ ಮಾಡುತ್ತಿರುತ್ತದೆ.
1973ರಲ್ಲಿ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಶುರು ಆದ ರತ್ನಮಾನಸ ವಿದ್ಯಾರ್ಥಿ ನಿಲಯ ಮೊದಲ ಬ್ಯಾಚಿನ ವಿದ್ಯಾರ್ಥಿಗಳಾಗಿ ಸೇರಿಕೊಂಡ ಇವರಿಬ್ಬರಿಗೆ ಪದವಿ ತನಕ ಅಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ಸಿಕ್ಕಿತು. ರತ್ನಮಾನಸ ಔಪಚಾರಿಕ ಶಿಕ್ಷಣದ ಜೊತೆಗೆ ಜೀವನ ಶಿಕ್ಷಣ ನೀಡುವ ಸಂಸ್ಥೆಯಾಗಿತ್ತು. ಅಲ್ಲಿ ಜೀವನ ಶಿಕ್ಷಣವನ್ನು ಪಡೆದ ಶೀನ-ಕೃಷ್ಣ ಇಂದಿಗೂ ಅದೇ ದಾರಿಯಲ್ಲಿ ಸಾಗಿದ್ದಾರೆ. ಯಾರ ಅವಲಂಬನೆಯೂ ಇಲ್ಲದ ಈ ಜೋಡಿಯ ಬದುಕು ಸಮಾಜಕ್ಕೆ ಪಾಠವಾಗಿದೆ.
ಮೊದಲು ಸಿಂಡಿಕೇಟ್ ಕೃಷಿ ಪ್ರತಿಷ್ಠಾನದಿಂದ ಕುಗ್ರಾಮಗಳಾದ ದಿಡುಪೆ ಮತ್ತು ನಾವೂರದಲ್ಲಿ ಕೆಲಸ. ನಂತರ ಮಣಿಪಾಲದಲ್ಲಿ ಅಲ್ಪಾವಧಿಗೆ ಉದ್ಯೋಗ. ಅಲ್ಲಿಂದ ಡಾ.ಸುದರ್ಶನ ಅವರ ಕರೆಯ ಮೇರೆಗೆ ಬಿಳಿಗಿರಿ ರಂಗನ ಬೆಟ್ಟ, ಕೊಳ್ಳೇಗಾಲದಲ್ಲಿ ಬುಡಕಟ್ಟು ಸೋಲಿಗರ ಜಾಗೃತಿ ಕೆಲಸ ಶುರು. ಅದಿವರ ಪ್ರೀತಿಯ ಕೆಲಸವಾಗಿತ್ತು. ಸೋಲಿಗರ ಮನ ಗೆದ್ದು ಶೀನಪ್ಪ-ಕೃಷ್ಣಪ್ಪರಾದರು. ಐದು ವರ್ಷಗಳಲ್ಲಿ ಬುಡಕಟ್ಟು ಸೋಲಿಗರನ್ನು ಸಂಘಟಿಸುವಲ್ಲಿ ಯಶಸ್ವಿಯಾದರು. ನಂತರ ಹಿರಿಯ ಅಧಿಕಾರಿ ವೀ.ಪ.ಬಳಿಗಾರ್ ಅವರ ಕೋರಿಕೆಯ ಮೇರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವಸಾಕ್ಷರರನ್ನು ಸಂಘಟಿಸಲು ತವರು ಆಗಮಿಸಿದರು. ಅಂದಿನಿಂದ ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಿವಿಧ ಅಭಿಯಾನಗಳ ಮೂಲಕ ಸಮಾಜ, ಸಮುದಾಯದ ಸುಸ್ಥಿರ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.
ಉಳ್ಳಾಲ ತಾಲೂಕಿನ ಮುಡಿಪುನಲ್ಲಿರುವ ವೃತ್ತಿ ತರಬೇತಿ ಕೇಂದ್ರದಲ್ಲಿ ಹೆಣ್ಣುಮಕ್ಕಳಿಗಾಗಿ ಟೈಲರಿಂಗ್ ಮತ್ತು ಕಂಪ್ಯೂಟರ್ ತರಬೇತಿ ನೀಡುತ್ತಿದ್ದಾರೆ. ಜೊತೆಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಾ ಸ್ವಾಸ್ಥ್ಯ ಸಮಾಜಕ್ಕಾಗಿ ಹಂಬಲಿಸುತ್ತಿದ್ದಾರೆ. ಇವರ ಸೇವೆಯ ಮಜಲುಗಳನ್ನು ನರೇಂದ್ರ ರೈ ದೇರ್ಲ ರಚಿತ ‘ಅದ್ವಿತೀಯ’ ಕೃತಿ ತೆರೆದಿಡುತ್ತದೆ.
ಗಾಂಧಿ ಮಾರ್ಗದ ಈ ಜೋಡಿ ಮಾತು ಬಾರದವರಿಗೆ ಮಾತು ಕಲಿಸುತ್ತಾರೆ. ಕುಣಿಯಲು ಹಿಂದೇಟು ಹಾಕುವವರಿಗೆ ಹೆಜ್ಜೆ ಹಾಕಲು ಕಲಿಸುತ್ತಾರೆ. ಜೀವನ ಶಿಕ್ಷಣವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಾರೆ. ಇವರ ಸಹವಾಸದಿಂದ ಸಾಮಾನ್ಯರು ಅಸಾಮಾನ್ಯರಾಗಿದ್ದಾರೆ. ನಾಯಕರಾಗಿ ಬೆಳೆದಿದ್ದಾರೆ.
ತಮ್ಮ ಅಡುಗೆಯನ್ನು ತಾವೇ ತಯಾರಿಸುತ್ತಾರೆ. ಕ್ಷೇತ್ರ ಕಾರ್ಯಕ್ಕೆ ಹೊರಡುವಾಗ ಬುತ್ತಿಯೂ ಜೊತೆಯಾಗುತ್ತದೆ. ಇವರು ಗಾಂಧಿಯಲ್ಲದೆ ಇನ್ನೇನು ಹೇಳಿ!.
ಶೀನ-ಕೃಷ್ಣ ಸೇವೆಯುದ್ದಕ್ಕೂ ಹಲವು ಅಭಿಯಾನಗಳ ಸುಸ್ಥಿರ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ.
ಶೀನ ಶೆಟ್ಟಿಯವರು ಉದ್ಯೋಗ ಖಾತರಿ ಯೋಜನೆಯ ಒಂಬುಡ್ಸ್ ಮನ್ ಆಗಿ ದ.ಕ ಮತ್ತು ಉಡುಪಿಯಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವರ ಗಾಂಧಿ ಮಾರ್ಗದ ನ್ಯಾಯಿಕ ವ್ಯವಸ್ಥೆ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಸ್ವಚ್ಛತಾ ರಾಯಭಾರಿಯಾಗಿದ್ದಾರೆ.
ಯಳಂದೂರಿನ ಮುತ್ತಯ್ಯ ಕರ್ನಾಟಕ ರಾಜ್ಯ ಮೂಲ ನಿವಾಸಿ ಬುಡಕಟ್ಟು ವೇದಿಕೆಯ ಸಂಚಾಲಕರು. ಮೂವತ್ತು ರಾಜ್ಯಗಳ ಆದಿವಾಸಿ ಸಮನ್ವಯ ಮಂಚ್ ಭಾರತ್ ಇದರ ನಿಕಟಪೂರ್ವ ಅಧ್ಯಕ್ಷರು ಮತ್ತು ಅಧ್ಯಕ್ಷೀಯ ಮಂಡಳಿ ಸದಸ್ಯರು.
ಶೀನಪ್ಪ-ಕೃಷ್ಣಪ್ಪರ ತರಬೇತಿ, ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕೆ ನಾನೇ ಜೀವಂತ ಉದಾಹರಣೆ. ಎಲ್ಲೋ ಇರಬೇಕಾಗಿದ್ದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಗಾಂಧಿ ತತ್ವದ ಅಚಲ ಪರಿಪಾಲಕರಾದ ಈ ಜೋಡಿ ಮಹಾದೇಶ್ವರ ಭಕ್ತರಾದ ಕಾರಯ್ಯ-ಬಿಲ್ಲಯ್ಯರಂತೆ ನಾವು ತಿಳಿದಿದ್ದೇವೆ. ಸರ್ವರಲ್ಲಿ ಸಮಭಾವ ಕಾಣುವ ಇಬ್ಬರೂ ತಾವು ನಾಯಕರಾಗದೆ ಇತರರನ್ನು ನಾಯಕರನ್ನಾಗಿ ಮಾಡುವ ಪವಾಡ ಪುರುಷರು ಎಂದು ಮುತ್ತಯ್ಯ ಅಭಿಪ್ರಾಯ ಪಡುತ್ತಾರೆ.
ಮಾನ್ಯ ಶೀನಪ್ಪ,ಕೃಷ್ಣಪ್ಪ ರ ನಿಸ್ವಾರ್ಥ ಸಮಾಜಸೇವೆ ಅನನ್ಯ, ಅನುಕರಣೀಯ. ಇವರೀರ್ವರ ತ್ಯಾಗಮಯ ಜೀವನ ಇತರರಿಗೂ ಮಾದರಿಯಾಗಲಿ.