Tuesday, March 28, 2023

Latest Posts

ಮಾದರಿ ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಸಂಕಲ್ಪ: ಸಚಿವ ಕೋಟ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಿಂದ ಮಾದರಿ ಸಾರ್ವಜನಿಕ ಸ್ಮಶಾನ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಗುರುವಾರ ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯ 2021-22ನೇ ಸಾಲಿನ ಬಜೆಟ್ ಅನುಷ್ಠಾನ ಪ್ರಗತಿ ಕುರಿತು ಪರಿಶೀಲನಾ ಸಭೆ ನಡೆಸಿದರು.

ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಇಂಥದ್ದೊಂದು ಕಾರ್ಯಕ್ರಮ ಅನುಷ್ಠಾನಿಸಬೇಕು. ಧಾರ್ಮಿಕ ದತ್ತಿ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಸುಮಾರು ₹ 25-30 ಲಕ್ಷ ವೆಚ್ಚದಲ್ಲಿ ಒಂದು ಸ್ಮಶಾನ ನಿರ್ಮಿಸುವ ಯೋಜನೆ ರೂಪಿಸಬೇಕು. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಆವರಣಗೋಡೆ ಇತ್ಯಾದಿ ಸೌಲಭ್ಯಗಳಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಕಳೆದ ವರ್ಷದ ಬಜೆಟ್‌ನಲ್ಲಿ ಸ್ಮಶಾನ ಅಭಿವೃದ್ಧಿಗೆ ₹ 18.37 ಕೋಟಿ ಹಂಚಿಕೆಯಾಗಿ, ಬಿಡುಗಡೆಯಾಗಿದೆ. ಹೆಚ್ಚುವರಿಯಾಗಿ ₹ 41.32 ಕೋಟಿಗಳ ಆವಶ್ಯಕತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮಾದರಿ ಸ್ಮಶಾನ ನಿರ್ಮಾಣದ ಹೊಸ ಯೋಜನೆಗೆ ಶೀಘ್ರವೇ ಅಂದಾಜುಪಟ್ಟಿ ತಯಾರಿಸಿ, ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯಗಳು:
ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಳವಡಿಸಬೇಕು. ನಿರ್ವಹಣಾ ಶುಲ್ಕವನ್ನು ಹಾಸಿಗೆ, ಮಂಚ, ಡೈನಿಂಗ್ ಟೇಬಲ್, ಕುಡಿಯುವ ನೀರು, ಸೋಲಾರ್ ಅಳವಡಿಕೆಗೆ ಬಳಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು. ಕಳೆದ ಆಯವ್ಯಯದಲ್ಲಿ ಹಂಚಿಕೆಯಾದ ₹ 175 ಕೋಟಿಗಳಲ್ಲಿ ₹107 ಕೋಟಿ ವೆಚ್ಚವಾಗಿದ್ದು, ಹೆಚ್ಚುವರಿಯಾಗಿ ₹ 419.67 ಕೋಟಿಗಳ ಆವಶ್ಯಕತೆಯಿದೆ ಎಂದರು.

ಹೆಚ್ಚುವರಿ ಕೊಳವೆ ಬಾವಿಗಳಿಗೆ ಅನುಮೋದನೆ:
ಸಮಾಜ ಕಲ್ಯಾಣ ಇಲಾಖೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಯಲು ಸಹಾಯಧನ ನೀಡಲಾಗುತ್ತಿದೆ. ಸಚಿವ ಸಂಪುಟದಲ್ಲಿ ಹೆಚ್ಚುವರಿಯಾಗಿ 9,210 ಕೊಳವೆ ಬಾವಿಗಳಿಗೆ ಅನುಮೋದನೆ ಸಿಕ್ಕಿದೆ. ಇದಕ್ಕೆ ಶಾಸಕರಿಂದ ಫಲಾನುಭವಿಗಳ ಪಟ್ಟಿಯನ್ನು ಪಡೆಯಬೇಕು. ಫಲಾನುಭವಿಗಳ ಆಯ್ಕೆ, ಹಂಚಿಕೆಗೆ ಮಾರ್ಗಸೂಚಿಗಳನ್ನು ತಯಾರಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಾಮಾಜಿಕ ಸಬಲೀಕರಣ ಕಾರ್ಯಕ್ರಮಗಳಲ್ಲಿ ಅಂತರ್ಜಾತಿ ವಿವಾಹ, ಒಳಪಂಗಡಗಳ ಅಂತರ್ಜಾತಿ ವಿವಾಹ, ವಿಧವಾ ವಿವಾಹ, ದೇವದಾಸಿಯರ ಮಕ್ಕಳ ವಿವಾಹ ಮತ್ತು ಸರಳ ವಿವಾಹಗಳಿಗೆ ಪ್ರೋತ್ಸಾಹಧನ ನೀಡಲು ಇನ್ನೂ 123 ಕೋಟಿ ರೂ.ಗಳ ಆವಶ್ಯಕತೆ ಇದೆ. ಈಗಾಗಲೇ 126 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇದೇ ವೇಳೆ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಸಹಿತ ಸಮಾಜ ಕಲ್ಯಾಣ ಇಲಾಖೆಯಲ್ಲಿನ ಕಾರ್ಯಕ್ರಮಗಳ ಯಾವುದೇ ಅನುದಾನ ಲ್ಯಾಪ್ಸ್ ಆಗದಂತೆ ಕ್ರಮವಹಿಸಲು ಸೂಚನೆ ನೀಡಿದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಪಿ., ಸಲಹೆಗಾರ ನಿವೃತ್ತ ಅಧಿಕಾರಿ ವೆಂಕಟಯ್ಯ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!