Thursday, December 8, 2022

Latest Posts

ಕೆಲ ರಾಜಕೀಯ ಪಕ್ಷಗಳು ಭಾರತ ವಿರೋಧಿ ಶಕ್ತಿಗಳಿಗೆ ಗುರಾಣಿಯಾಗಿವೆ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಖ್ವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಅನ್ನು ಕೇಂದ್ರ ಸರ್ಕಾರ ಬ್ಯಾನ್‌ ಮಾಡಿದ ಬೆನ್ನಲ್ಲೇ,  ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿಯ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ, ಕೆಲವು ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವ ಸಂಘಟನೆಗಳಿಗೆ ಗುರಾಣಿಯಂತೆ ವರ್ತಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಎಫ್‌ಐ ನಿಷೇಧದ ವಿಚಾರವಾಗಿ ಪ್ರತಿಕ್ರಿಯಿಸಿದ ನಖ್ವಿ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದ ಭಾರತ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಪರಸ್ಪರ ಸೌಹಾರ್ದತೆ ಮತ್ತು ಸುಭದ್ರ ದೇಶವೇ ನಮ್ಮ ಶಕ್ತಿ. ನಮ್ಮ ಈ ಶಕ್ತಿಯೇ ಭಾರತ ವಿರೋಧಿ ಶಕ್ತಿಗಳನ್ನು ಕಂಗೆಡಿಸುತ್ತಿದೆ. ಧರ್ಮವನ್ನು ರಕ್ಷಣಾ ಕವಚವನ್ನಾಗಿ ಮಾಡಿಕೊಂಡಿರುವ ಈ ಶಕ್ತಿಗಳು, ದೇಶದ ಸೌಹಾರ್ದತೆ ಮತ್ತು ಭದ್ರತೆಯ ವಿರುದ್ಧ ಪಿತೂರಿ ನಡೆಸುತ್ತಿವೆ ಎಂದು ಮಾಜಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನಖ್ವಿ ಕಿಡಿಕಾರಿದ್ದಾರೆ.
‘ಕೆಲವು ರಾಜಕೀಯ ಪಕ್ಷಗಳು ಮತ್ತು ಪ್ರಭಾವಶಾಲಿಯಾದ ಜನರು ಇಂತಹ ಶಕ್ತಿಗಳಿಗೆ ರಕ್ಷಣೆ ನೀಡುತ್ತಿರುವುದು ದುರದೃಷ್ಟಕರವಾಗಿದೆ. ʼಅಂತಹ ಜನರು ಈಗ ಇಂತಹ ದುಷ್ಟ ಶಕ್ತಿಗಳೊಂದಿಗೆ ನಿಂತಿರುವಂತೆ ಕಾಣುತ್ತಿದೆ’ ಎಂದು ಅವರು ಹೇಳಿದರು. ʼಇದೇ ಜನರು ಕೆಲವೊಮ್ಮೆ ದೇಶದ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಾರೆ, ಕೆಲವೊಮ್ಮೆ ಸರ್ಜಿಕಲ್ ಸ್ಟ್ರೈಕ್‌ಗಳ ಬಗ್ಗೆ ಮತ್ತು ಕೆಲವೊಮ್ಮೆ ಭಯೋತ್ಪಾದಕರು ಸತ್ತಾಗ ಕೂಗು ಎಬ್ಬಿಸುತ್ತಾರೆ ಎಂದು ನಖ್ವಿ ಮೂದಲಿಸಿದ್ದಾರೆ.
ಸರ್ಕಾರವು ವಿಚ್ಛಿದ್ರವಕಾರಿ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಿದಾಗ ಅಂತಹ ಶಕ್ತಿಗಳನ್ನು ಈ ಜನರು ಬೆಂಬಲಿಸುವುದು ಕಂಡು ಬರುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ದೇಶ ಮತ್ತು ಜನರ ಸುರಕ್ಷತೆಗೆ ಕೇಂದ್ರ ಸರ್ಕಾರ ಬದ್ಧತೆಯಿಂದ ಕ್ರಮ ಕೈಗೊಂಡಿದೆ. ಆದರೆ ಇದರಲ್ಲೂ ಜನರು ತಮ್ಮ ರಾಜಕೀಯ ಲಾಭ ಮತ್ತು ನಷ್ಟವನ್ನು ನೋಡುತ್ತಿರುವುದು ದುರದೃಷ್ಟಕರ ಎಂದು ನಖ್ವಿ ಬೇಸರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!