November 18, 2026
Wednesday, November 18, 2026
spot_img

‘ಕೆಲವು ಡಿಶ್ ಗಳು ತಣ್ಣಗೇ ಇರಬೇಕು’: ಲತೀಫ್ ಭಟ್ ಹ*ತ್ಯೆ ಬೆನ್ನಲ್ಲೇ CRPF ಮುಖ್ಯಸ್ಥರ ಪೋಸ್ಟ್ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ ಉಗ್ರರ ವಿರುದ್ಧದ ಕಾರ್ಯಾಚರಣೆ ಯಶಸ್ವಿಯಾದ ಬೆನ್ನಲ್ಲೇ ಸಿಆರ್‌ಪಿಎಫ್ ಮುಖ್ಯಸ್ಥರ ಪೋಸ್ಟ್ ಒಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಲಷ್ಕರ್-ಎ-ತೊಯ್ಬಾ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್‌ನನ್ನು ಕುಲ್ಗಾಮ್‌ನಲ್ಲಿ ಹತ್ಯೆಗೈದ ಕಾರ್ಯಾಚರಣೆಯನ್ನು ಶ್ಲಾಘಿಸಿರುವ ಸಿಆರ್‌ಪಿಎಫ್ ಮಹಾನಿರ್ದೇಶಕ (DG) ಜಿಪಿ ಸಿಂಗ್, ಸಾಮಾಜಿಕ ಜಾಲತಾಣದಲ್ಲಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಪೋಸ್ಟ್ ಇದೀಗ ಸಾಕಷ್ಟು ಗಮನ ಸೆಳೆಯುತ್ತಿದೆ.

‘ಕೆಲವು ಡಿಶ್ ತಣ್ಣಗೇ ಇರಬೇಕು’ ಎಂದ ಡಿಜಿ

ಲತೀಫ್ ಭಟ್ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜಿಪಿ ಸಿಂಗ್, “ಅಭಿನಂದನೆಗಳು ಗೆಳೆಯರೇ, ಕೆಲವು ಡಿಶ್ ಗಳು ತಣ್ಣಗೇ ಬಡಿಸುವುದು ಉತ್ತಮ. ಅದೂ ಚಳಿಯ ವಾತಾವರಣದಲ್ಲೂ! ಎಂದು ಸಂದೇಶ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ನಡೆದ ದಾಳಿಗೆ ತಕ್ಕ ಪ್ರತಿಕ್ರಿಯೆ ಎಂಬ ರೀತಿಯಲ್ಲಿ ಅವರ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಸಿಆರ್‌ಪಿಎಫ್ ಮೇಲಿನ ದಾಳಿಯ ಪ್ರಮುಖ ಆರೋಪಿ ಹತ

ನವೆಂಬರ್ 11ರಂದು ಮಿರ್ ಬಜಾರ್ ಸಮೀಪದ ಅಖ್ರಾನ್‌ನಲ್ಲಿರುವ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದರು. ಈ ದಾಳಿಯ ಪ್ರಮುಖ ಶಂಕಿತ ಆರೋಪಿ ಲತೀಫ್ ಭಟ್ ಎನ್ನಲಾಗಿತ್ತು. ಆತನ ಚಲನವಲನದ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಕುಲ್ಗಾಮ್‌ನ ಝಂಗಲ್‌ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು.

ಮಸೀದಿಯೊಳಗೆ ಅಡಗಿದ್ದ ಉಗ್ರನಿಗೆ ಶರಣಾಗತಿ ಮನವಿ

ಸೋಮವಾರ ಲರೂ ಬೈಪಾಸ್ ಬಳಿ ನಡೆದ ಎನ್‌ಕೌಂಟರ್‌ನಿಂದ ತಪ್ಪಿಸಿಕೊಂಡಿದ್ದ ಭಟ್, ಝಂಗಲ್‌ಪೋರಾದ ಮಸೀದಿಯೊಳಗೆ ಆಶ್ರಯ ಪಡೆದಿದ್ದ. ಭದ್ರತಾ ಪಡೆಗಳು ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆತನಿಗೆ ಹಲವು ಬಾರಿ ಶರಣಾಗುವಂತೆ ಮನವಿ ಮಾಡಿದ್ದವು. ವಿಡಿಯೋ ಕಾಲ್ ಮೂಲಕವೂ ಮನವೊಲಿಸಲು ಪ್ರಯತ್ನಿಸಲಾಗಿತ್ತು. ಆದರೆ ಆತ ಒಪ್ಪದೆ ಗುಂಡಿನ ದಾಳಿ ನಡೆಸಿದ್ದರಿಂದ ಪ್ರತಿದಾಳಿ ನಡೆಸಲಾಯಿತು. ಈ ವೇಳೆ ಮಸೀದಿಗೆ ಯಾವುದೇ ಹಾನಿಯಾಗದಂತೆ ಕಾರ್ಯಾಚರಣೆ ಪೂರ್ಣಗೊಳಿಸಲಾಯಿತು.

Must Read

Skip to toolbar