ಮಸ್ಕಿ: ತಾಲೂಕಿನ ಬೆಲ್ಲದ ಕಲ್ಯಾಣ ಸೋಮೇಶ್ವರನ ಮರಡಿಯಲ್ಲಿ ಚಾಲುಕ್ಯರ ಹೊಸ ಶಾಸನ ಅವಶೇಷಗಳನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿಯವರು ಶೋಧಿಸಿದ್ದಾರೆ.
ಮೆದಿಕಿನಾಳ ಗ್ರಾಮದ ಕ್ರಿ.ಶ.18-19 ನೇ ಶತಮಾನದ ಶಾಸನದಲ್ಲಿ ಬಾಲೈಮರೆ (ಬೆಲ್ಲದ ಮರಡಿ) ಸೀಮೆಯೆಂಬ ಆಡಳಿತ ಘಟಕವಾಗಿತ್ತು. ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಈ ಗ್ರಾಮದ ನಾಯಕ ಜನಾಂಗ ಗುಜ್ಜಲ ಗೋತ್ರ (ಬೆಡಗು)ದ ದೇಸಾಯಿ ಮನೆತನದವರು ಬೆಲ್ಲದ ಮರಡಿ ಸುತ್ತಮುತ್ತಲಿನ 32 ಹಳ್ಳಿಗಳನ್ನು ಆಳ್ವಿಕೆ ಮಾಡುತ್ತಿದ್ದರೆಂದು ತಿಳಿಸಿರುತ್ತಾರೆ.
ಈ ಸ್ಥಳ ಚಿಕ್ಕ ಬೆಟ್ಟದ (ಮರಡಿ) ಮೇಲಿದ್ದು ಇಲ್ಲಿನ ಜಮೀನು ಕಬ್ಬಿನ ಬೆಳೆಗೆ ಪ್ರಸಿದ್ಧವಾಗಿತ್ತು. ಆದುದರಿಂದ ಬಹುತೇಕ ಗ್ರಾಮದ ಜನರು ತಾವು ಬೆಳೆದ ಕಬ್ಬನ್ನು ಬೆಲ್ಲ ತಯಾರಿಕೆಗೆ ಹಿಂದಿನ ಕಾಲದಲ್ಲಿ ಬಳಸುತ್ತಿದ್ದರು. ಇಂತಹ ಬೆಲ್ಲಕ್ಕೆ ಹೆಸರುವಾಸಿಯಾದ ಗ್ರಾಮವು ಮರಡಿಯಲ್ಲಿದ್ದು ಬೆಲ್ಲದ + ಮರಡಿ = ಬೆಲ್ಲದ ಮರಡಿಯಾಗಿರಬೇಕು.
ಈ ಗ್ರಾಮದ ಕ್ಷೇತ್ರ ಕಾರ್ಯದಲ್ಲಿ ಪರಪ್ಪ ಬಂಡಾರಿ ಹಂಚಿನಾಳ, ಬಸವರಾಜ ನಾಯಕ ದೇಸಾಯಿ ಕೋಳಬಾಳ, ಸ್ಥಳೀಯರಾದ ವೀರಭದ್ರಪ್ಪ ಹೂಗಾರ, ದೇವಿಂದ್ರಪ್ಪ ಗ್ರಾಮ ಪಂಚಾಯತಿ ಸದಸ್ಯರು, ಸೋಮನಾಥ ಕಾಟಗಲ್, ವೆಂಕೋಬಹುಲ್ಲೇರು (ದೇಸಾಯಿ) ಮತ್ತು ಅಮರೇಶ ಹೂಗಾರ ನೆರವಾಗಿದ್ದಾರೆ ಎಂದು ಸಂಶೋಧಕರು ತಿಳಿಸಿದರು.