ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸೂಕ್ತವಾಗಿರದ ಕಾರಣ ತಂದೆ ಮಗನಿಗೆ ಬೈಕ್ ಕೊಡಿಸಿಲ್ಲ, ಇದರಿಂದ ಮಾನಸಿಕವಾಗಿ ಕುಗ್ಗಿದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
20 ವರ್ಷದ ವಿಕಾಸ್ ಆರ್. ನ್ಯಾಮತಿ ಪಟ್ಟಣದಲ್ಲಿ ವಾಸವಾಗಿದ್ದ. ಆತ ತಂದೆಗೆ ಬೈಕ್ ಬೇಕೇ ಬೇಕು ಎಂದು ಹಠ ಮಾಡಿದ್ದ. ಆದರೆ ಅದನ್ನು ಕೊಡಿಸಲು ಪೋಷಕರಿಗೆ ಆಗಿರಲಿಲ್ಲ.
ಇದೇ ವಿಚಾರಕ್ಕೆ ಯುವಕ ಮಾನಸಿಕವಾಗಿ ಕುಗ್ಗಿ ತಂದೆ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದ. ಮನೆಯವರ ಜೊತೆ ಮಾತನಾಡುವುದು ಮತ್ತು ಸರಿಯಾಗಿ ಊಟ ಮಾಡುವುದನ್ನು ಸಹ ಬಿಟ್ಟಿದ್ದ. ಮನೆ ತೊರೆದು ಒಂದು ವಾರದಿಂದ ಕುಂಕುವ ಗ್ರಾಮದ ಸಂಬಂಧಿಕರ ಮನೆಯಲಿದ್ದ. ಅಲ್ಲೇ ಆತ ವಿಷ ಸೇವಿಸಿದ್ದಾನೆ.
ತಕ್ಷಣ ಗ್ರಾಮಸ್ಥರು ಆತನನ್ನು ನ್ಯಾಮತಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಮತ್ತು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ.