ರಾಜ್ಯ ಚುನಾವಣಾ ಅಖಾಡಕ್ಕೆ ಸೋನಿಯಾ ಗಾಂಧಿ: ಹುಬ್ಬಳ್ಳಿಯಲ್ಲಿಂದು ಮತಬೇಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ರಾಜ್ಯದಲ್ಲಿ ವ್ಯಾಪಕ ಪ್ರಚಾರ ಮಾಡಿದ್ದಾರೆ. ಇದರ ಜೊತೆಗೆ ಇಂದು ರಾಜ್ಯ ಚುನಾವಣಾ ಆಖಾಡಕ್ಕೆ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಪ್ರವೇಶಿಸಲಿದ್ದು, ಇಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.

ಇಂದು ಸಂಜೆ 5.30ಕ್ಕೆ ಹುಬ್ಬಳ್ಳಿ ನಗರದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಸೋನಿಯಾ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಹುಬ್ಬಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚುನಾವಣಾ ರ‍್ಯಾಲಿ ಮೂಲಕ ಮತಬೇಟೆ ನಡೆಸಲಿದ್ದಾರೆ.

ಈ ಬಾರಿಯ ಚುನಾವಣೆ ಭಾರಿ ಮಹತ್ವದ್ದಾಗಿದ್ದು, ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿದರೆ ದಕ್ಷಿಣದ ಯಾವ ರಾಜ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿರುವುದಿಲ್ಲ. ಹೀಗಾಗಿ ಕಾಂಗ್ರೆಸ್​ ಪಕ್ಷವು ಬಿಜೆಪಿಯನ್ನು ಸೋಲಿಸಲು ಶತ ಪ್ರಯತ್ನ ನಡೆಸುತ್ತಿದೆ.

ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡಿರುವ ಕಾರಣ ಮತ್ತು 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಿದ ಚುನಾವಣಾ ಸೋಲುಗಳಿಂದಾಗಿ ಎಚ್ಚೆತ್ತುಕೊಂಡಿದೆ. ಅಷ್ಟೇ ಅಲ್ಲದೆ ಪ್ರಬಲ ರಾಜ್ಯ ನಾಯಕತ್ವವನ್ನು ಹೊಂದಿರುವ ಕರ್ನಾಟಕದ ಗೆಲುವಿನ ಮೇಲೆ ಕಾಂಗ್ರೆಸ್​ ಈ ಬಾರಿ ಬಲವಾದ ವಿಶ್ವಸದಿಂದಿದೆ.

ರಾಹುಲ್ ಗಾಂಧಿ ರಾಜ್ಯದಲ್ಲಿ ಇದುವರೆಗೆ 17 ರ‍್ಯಾಲಿ ಮತ್ತು ರೋಡ್‌ಶೋಗಳನ್ನು ನಡೆಸಿದ್ದಾರೆ. ಸಹೋದರಿ ಪ್ರಿಯಾಂಕಾ ಗಾಂಧಿ 19 ರ‍್ಯಾಲಿಗಳನ್ನು ಮಾಡಿದ್ದಾರೆ. ಗಾಂಧಿ ಕುಟುಂಬದ ಸದಸ್ಯರಲ್ಲದೆ, ಕರ್ನಾಟಕದವರೇ ಆದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ 20 ದಿನಗಳಿಂದ ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್​ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಕಳೆದ ಎರಡು ತಿಂಗಳಿಂದ ಇಲ್ಲಿಯೇ ಬೀಡು ಬಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!