ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೀಡಿದ್ದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಈ ಬಗ್ಗೆ ಕಾಂಗ್ರೆಸ್ ಬೇಷರತ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. ಸೋನಿಯಾ ಗಾಂಧಿಯವರು ನೀಡಿದ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದೆ.
ಸೋನಿಯಾ ಗಾಂಧಿ ರಾಷ್ಟ್ರಪತಿಗಳ ಬಗ್ಗೆ ನೀಡಿದ ಹೇಳಿಕೆಗೆ ವ್ಯಕ್ತವಾದ ವಿರೋಧದ ನಡುವೆಯೇ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ರಾಷ್ಟ್ರಪತಿ ಅಥವಾ ಯಾವುದೇ ನಾಗರಿಕರನ್ನು ಎಂದಿಗೂ ಅವಮಾನಿಸಲು ಸಾಧ್ಯವಿಲ್ಲ. ಬಿಜೆಪಿ ಸೋನಿಯಾ ಗಾಂಧಿಯ ಹೇಳಿಕೆಯನ್ನು ತಿರುಚಿದೆ ಎಂದು ಹೇಳಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ನಮ್ಮ ನಾಯಕರು ಎಂದಿಗೂ ರಾಷ್ಟ್ರಪತಿ ಅಥವಾ ಯಾವುದೇ ನಾಗರಿಕರನ್ನು ಅವಮಾನಿಸಲು ಸಾಧ್ಯವಿಲ್ಲ. ಇದು ನಮ್ಮ ಸಂಸ್ಕೃತಿಯಲ್ಲ ಎಂದು ಖರ್ಗೆ ಹೇಳಿದ್ದಾರೆ.
ಹೊಸ ಸಂಸತ್ತಿನ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿಯನ್ನು ಆಹ್ವಾನಿಸದ ದಿನವೇ ಮೋದಿ ಸರ್ಕಾರವು ರಾಷ್ಟ್ರಪತಿಗಳನ್ನು ಅವಮಾನಿಸಿತು. ಬಿಜೆಪಿ ಉದ್ದೇಶಪೂರ್ವಕವಾಗಿ ನಮ್ಮ ಪ್ರಸ್ತುತ ರಾಷ್ಟ್ರಪತಿ ಮತ್ತು ಹಿಂದಿನ ರಾಷ್ಟ್ರಪತಿಗಳನ್ನು ಪ್ರಜಾಪ್ರಭುತ್ವದ ದೇವಾಲಯ ಮತ್ತು ರಾಮ ಮಂದಿರ ಎರಡರಿಂದಲೂ ದೂರವಿಟ್ಟಿತ್ತು ಎಂದು ಅವರು ಟೀಕಿಸಿದ್ದಾರೆ.
ಬಿಜೆಪಿ ಉದ್ದೇಶಪೂರ್ವಕವಾಗಿ ಪ್ರಸ್ತುತ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಅವರಿಗಿಂತ ಹಿಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಸಂಸತ್ತು ಮತ್ತು ಅಯೋಧ್ಯೆಯ ರಾಮ ಮಂದಿರದಿಂದ ದೂರವಿಟ್ಟಿದೆ ಎಂದು ಖರ್ಗೆ ಆರೋಪಿಸಿದರು.