ರಾಜಕೀಯಕ್ಕೆ ಬರುವ ಕುರಿತು ಶೀಘ್ರದಲ್ಲೇ ಪ್ರಕಟಿಸುವೆ: ಗಾಲಿ ಜನಾರ್ಧನ ರೆಡ್ಡಿ

ಹೊಸದಿಗಂತ ವರದಿ, ಬಳ್ಳಾರಿ:

ರಾಜಕೀಯದಲ್ಲಿ ಬರುವ ಕುರಿತು ಶೀಘ್ರದಲ್ಲೇ ಪ್ರಕಟಿಸುವೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಹೇಳಿದರು.
ನಗರದಲ್ಲಿ ಶರನ್ನವರಾತ್ರಿ ನಿಮಿತ್ತ ಶ್ರೀ ಕನಕ ದುರ್ಗಮ್ಮ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸೋಮವಾರ ಮಾತನಾಡಿದರು, ಅಭಿಮಾನಿಗಳು, ಬೆಂಬಲಿಗರು ರಾಜಕಾರಣದಲ್ಲಿ ಸಕ್ರೀಯರಾಗುವಂತೆ ಒತ್ತಾಯಿಸುತ್ತಿದ್ದಾರೆ, ಶೀಘ್ರದಲ್ಲೇ ಈ ಕುರಿತು ತೀರ್ಮಾನ ಪ್ರಕಟಿಸುವೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ. ಪ್ರತಿಯೊಂದಕ್ಕೂ ಸಿಬಿಐ ಅಧಿಕಾರಿಗಳ ಕಿರುಕುಳ ಸಾಕಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ನನ್ನ ವಿರುದ್ಧ ತಪ್ಪು‌ಕೇಸ್ ವೊಂದನ್ನು ಹಾಕಿದ್ದಾರೆ. ಈ ಹಿನ್ನೆಲೆ ಕೇಸ್ ಬೀಳುವುದು ಪಕ್ಕಾ ಆಗಿದೆ, ಇದಕ್ಕಾಗಿಯೇ ಕೇಸ್ ನಡೆಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ, ನನ್ನ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿ ಬರೋಬ್ಬರಿ 12ವರ್ಷಗಳು ಕಳೆದಿವೆ, ಬಳ್ಳಾರಿಯಲ್ಲಿ ಇರಲು ಅಧಿಕಾರಿಗಳು ನ್ಯಾಯಾಲಯದಲ್ಲಿ ಪ್ರಸ್ತಾಪ ಮಾಡ್ತಿದ್ದಾರೆ, ಪ್ರತಿದಿನ ವಿಚಾರಣೆ ನಡೆಸಿ, 3-4 ತಿಂಗಳಲ್ಲಿ ಇತ್ಯರ್ಥ ಮಾಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿರುವೆ. ಬಳ್ಳಾರಿಯ ಜನ, ಬಳ್ಳಾರಿ ‌ಮಣ್ಣನ್ನು ಎಂದೂ ಮರೆಯೋಲ್ಲ, ಬಳ್ಳಾರಿಯ ಗಾಳಿಯನ್ನು ಸೇವಿಸಬೇಕು, ಇಲ್ಲೇ ಇರಬೇಕು ಎಂಬುದು ನನ್ನ ಆಸೆ, ಕಳೆದ 14 ತಿಂಗಳಿಂದ ನಾನು ಮನೆ ಹಾಗೂ ದೇಗುಲಗಳಿಗೆ ಓಡಾಡುತ್ತಿದ್ದೇನೆ, ಅಧಿಕಾರಿಗಳು ಪದೇ ಪದೇ ಕಿರುಕುಳ ನೀಡ್ತಿದ್ದಾರೆ ಎಂದು ತಿಳಿಸಿದರು. ನ್ಯಾಯಾಲಯದಲ್ಲಿ ನನ್ನ ವಿರುದ್ಧ ದಾಖಲಾದ ಪ್ರಕರಣಗಳ ಹಿನ್ನೆಲೆ ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿಗೆ ಬೇಡಿಕೊಂಡಿದ್ದೆ, ಭಕ್ತರಿಗೆ ಅನ್ನಸಂತರ್ಪಣೆ, ವಿಶೇಷ ಅಲಂಕಾರ ಸೇವೆ ಮಾಡಿಸಬೇಕು ಎಂದು ಹರಕೆ ಹೊತ್ತುಕೊಂಡಿದ್ದೆ, ಅದಕ್ಕಾಗಿ ದೇಗುಲಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿರುವೆ, ಇಡೀ ದೇಶದ ಜನರಿಗೂ ಒಳಿತನ್ನು ಮಾಡಲಿ ಎಂದು ಬೇಡಿಕೊಂಡಿರುವೆ ಎಂದರು. ಈ ಸಂದರ್ಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬೂಡಾ ಮಾಜಿ ಅಧ್ಯಕ್ಷ ಕಾರ್ಕಲತೋಟ ಪಾಲನ್ನ, ಬೂಡಾ ಅಧ್ಯಕ್ಷ ಮಾರುತಿ ಪ್ರಸಾದ್ ಸರ್ವಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!