ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಶೀಘ್ರದಲ್ಲೇ ಮಾಜಿ ಆಗಲಿದ್ದಾರೆ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇನೂ ಭವಿಷ್ಯ ನುಡಿಯುತ್ತಿಲ್ಲ. ರಾಜಕೀಯ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ ಎಂದರು.
ನಮ್ಮ ಬಗ್ಗೆ, ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಅದಕ್ಕೆ ನಾನು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸುತ್ತಿದ್ದೇನೆ. ನಾವೇನು ಸರ್ಕಾರ ಬೀಳಿಸುವುದಿಲ್ಲ. ಮುಂದಿನ ದಿನಗಳಲ್ಲಿ ಜನರೆ ಉತ್ತರ ಕೊಡಲಿದ್ದಾರೆ ಎಂದು ಹೇಳಿದರು.
ಸರ್ಕಾರ ಬಿದ್ದರೆ ಅದು ಬೆಳಗಾವಿ ರಾಜಕಾರಣದಿಂದ ಮಾತ್ರ, ಅದ್ರಲ್ಲೂ ಡಿ.ಕೆ.ಶಿವಕುಮಾರ್ ಅವರ ಹಸ್ತಕ್ಷೇಪದಿಂದ ಬೀಳಲಿದೆ ಎಂದ ಅವರು, ಡಿ.ಕೆ.ಶಿವಕುಮಾರ್ ಒಬ್ಬ ಮೋಸಗಾರ. ನೇರಾ ನೇರ ಫೈಟ್ ಮಾಡುವ ಶಕ್ತಿ ಇಲ್ಲ. ಅವನೊಬ್ಬ ಪುಕ್ಕಲು ಎಂದು ರಮೇಶ ಜಾರಕಿಹೊಳಿ ಜರಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹೇಳದೇನೇ ಲಾಟರಿ ಸಚಿವರ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಲೇ, ಸರ್ಕಾರ ಬೀಳಬಾರದು. ಜನಾನೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಾರಕಿಹೊಳಿ ಮಾರ್ಮಿಕವಾಗಿ ನುಡಿದರು.