ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್‌ ಎಸ್ ಬಾಲಿ ನಿಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಹುವಾದ್ಯ ಪರಿಣಿತರಾಗಿ ಎಸ್. ಬಾಲಿ ಎಂದೇ ಪ್ರಖ್ಯಾತರಾಗಿರುವ ಎಸ್ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದಾರೆ.

ಮೃದಂಗ, ತಬಲಾ, ಢೋಲಕ್‌ , ಢೋಲ್ಕಿ, ಖಂಜರಿ, ಕೋಲ್‌ ಹೀಗೆ ಹತ್ತು ಹಲವು ಲಯವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದ ಅಪರೂಪದ ವಿದ್ವಾಂಸ ಎಸ್ ಬಾಲಸುಬ್ರಹ್ಮಣ್ಯಂ ಅವರಿಗೆ 71 ವರ್ಷವಾಗಿತ್ತು.

ಕನ್ನಡ ಚಿತ್ರರಂಗದ ಅನೇಕ ಸಂಗೀತ ಸಾಧಕರು ಬಾಲಿ ಅವರನ್ನು ರಿದಂ ಕಿಂಗ್‌ ಎಂದೇ ಕರೆಯುತ್ತಿದ್ದರು. ಸುಗಮ ಸಂಗೀತದಲ್ಲೂ ಇವರು ಮಾಸ್ಟರ್‌, ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್‌, ಆಯೋಜಕರು ಮತ್ತು ನಿರ್ದೇಶಕರು ಎಂಬ ಹೆಗ್ಗಳಿಗೆ ಇವರದು.

ತಂದೆ ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್ ಮತ್ತು ಸಾವಿತ್ರಿ ದಂಪತಿಯ ಮಗನಾಗಿ 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಬಾಲಿ ಅವರು ಜನಿಸಿದರು. ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು ಮೂಡಿಸಿಕೊಂಡ ಬಾಲಿ ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ ಮೃದಂಗ ಕಲಿತರು. ಮುಂದೆ ಅವರು ಹಲವಾರು ಶಾಸ್ತ್ರೀಯ ಸಂಗೀತಗಾರರಿಗೆ ಮೃದಂಗ ಪಕ್ಕವಾದ್ಯ ಸಹಕಾರದಲ್ಲಿ ಬಾಗಿಯಾಗಿದ್ದಾರೆ.

ಬಾಲಿಯವರು ಶಾಸ್ತ್ರೀಯವಾಗಿ ಕಲಿತದ್ದು ಮೃದಂಗ ಮಾತ್ರ. ಆದರೆ ತಮ್ಮ ಶ್ರದ್ಧೆಯಲ್ಲೇ ತಬಲ, ಢೋಲಕ್, ಢೋಲ್ಕಿ, ಖೋಲ್, ಖಂಜಿರ ಮುಂತಾದ ಹಲವಾರು ವಾದ್ಯಗಳನ್ನು ನುಡಿಸುವ ಪರಿಣತಿಯನ್ನು ಸಾಧಿಸಿದರು. ಹೀಗೆ ಸಕಲ ಲಯ ವಾದ್ಯಗಳ ನುಡಿಸುವಿಕೆಯಲ್ಲಿ ಪರಿಣತಿ ಪಡೆದ ಅಪರೂಪದ ಲಯವಾದ್ಯಗಾರ ಇಂದು ಅಗಲಿದ್ದಾರೆ.

ಚಲನಚಿತ್ರ, ನೃತ್ಯ, ನಾಟಕ, ಕಿರುತೆರೆ, ಧ್ವನಿಮುದ್ರಣ ಕಾರ್ಯಗಳಲ್ಲಿ ಖ್ಯಾತ ಸಂಗೀತಗಾರರುಗಳಾದ ಜಿ.ಕೆ. ವೆಂಕಟೇಶ್, ವಿಜಯಭಾಸ್ಕರ್, ಎಂ. ರಂಗರಾವ್, ರಾಜನ್-ನಾಗೇಂದ್ರ, ಟಿ.ಜಿ. ಲಿಂಗಪ್ಪ, ಅನಂತಸ್ವಾಮಿ, ಅಶ್ವತ್ಥ್-ವೈದಿ ಮುಂತಾದವರ ಸಂಗೀತ ಸಂಯೋಜನೆಗಳಿಗೆ ಬಾಲಿ ಅವರ ಲಯ ಸಂಯೋಜನೆ ಮಾಡಿದ್ದಾರೆ.‍‍ ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್-ಅರೇಂಜರ್-ಕಂಡಕ್ಟರ್ ಎಂಬ ಹೆಗ್ಗಳಿಕೆ ಅವರದ್ದಾಗಿದೆ.

ಬಾಲಿ ಅವರು ಕನ್ನಡದ ಮೊಟ್ಟಮೊದಲ ಧ್ವನಿಸುರಳಿ ಕವಿ ನಿಸಾರ ಅಹಮ್‌ದರವರ ನಿತ್ಯೋತ್ಸವದಿಂದ ಮೊದಲುಗೊಂಡು ಮೈಸೂರು ಅನಂತಸ್ವಾಮಿಯವರ ಸಂಯೋಜನೆಗಳಿಗೆ ಸಹಾಯಕರಾಗಿ ವಾದ್ಯದ ನೆರವು ನೀಡಿದವರು. ಹಲವಾರು ಧ್ವನಿಸುರುಳಿಗಳು, ಕಿರುತೆರೆ, ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ಜ್ಯೂರಿ ಪ್ಯಾನೆಲ್‌ನಲ್ಲಿ ಇರುತ್ತಿದ್ದರು.

ವಿಶ್ವದೆಲ್ಲೆಡೆ ಬಾಲಿ ಅವರ ಲಯ ಸಂಗೀತ ಶಾಶ್ವತವಾಗಿ ಮೊಳಗುತ್ತಲೇ ಇದೆ. 1970ರ ದಶಕದಲ್ಲಿ ಬಾಲಿ ಬಹುಬೇಡಿಕೆಯ ವ್ಯಕ್ತಿಯಾಗಿದ್ದರು. ಅವರಿಗ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಗೌರವ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!