ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 179ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಸಿಬ್ಬಂದಿ ಹರಸಾಹಸ ಪಟ್ಟು ಇಬ್ಬರ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಬೆಳಗ್ಗೆ ನಡೆದ ವಿಮಾನ ದುರಂತದ ವಿಡಿಯೋ ಕಂಡು ಇಡೀ ವಿಶ್ವವೇ ಆತಂಕಕ್ಕೊಳಗಾಗಿದ್ದು, 179 ಜನರ ಸಾವಿಗೆ ಕಂಬನಿ ಮಿಡಿದಿದೆ. ಈ ದುರಂತ ಸಂಪೂರ್ಣ ಹೊಣೆಗಾರಿಕೆಯನ್ನು ತಾವೇ ತೆಗೆದುಕೊಳ್ಳುವದಾಗಿ ಜೆಜು ಏರ್‌ವೇಸ್‌ನ ಸಿಇಓ ಕಿಮ್ ಇ-ಬೇಜ್ ಹೇಳಿದ್ದಾರೆ.
ಸಿಬ್ಬಂದಿ ಸೇರಿ 181 ಜನರಿದ್ದ ವಿಮಾನವೊಂದು ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿ ಹೊರಗೆ ಸರಿದು ಮುವಾನ್ ವಿಮಾನ ನಿಲ್ದಾಣದ ತಡೆಗೋಡೆಗೆ ಢಿಕ್ಕಿಯಾಗಿ ಸ್ಫೋಟಗೊಂಡಿತ್ತು.
ಈ ಭೀಕರ ಅಪಘಾತದಲ್ಲಿ 179 ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ವಿಮಾನದಲ್ಲಿದ್ದ 181 ಜನರ ಪೈಕಿ 175 ಪ್ರಯಾಣಿಕರು ಮತ್ತು ಆರು ಮಂದಿ ವಿಮಾನ ಸಿಬ್ಬಂದಿ ಇದ್ದರು ಎನ್ನಲಾಗಿದೆ.
Jeju Airways ಪ್ರಯಾಣಿಕರಲ್ಲಿ ಕ್ಷಮೆ ಕೇಳಿರುವ ಕಿಮ್ ಇ-ಬೇಜ್, 179 ಜನರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈ ದುರಂತಕ್ಕೆ ಕಾರಣ ಏನೇ ಇರಲಿ. ಕಂಪನಿಯ ಸಿಇಒ ಆಗಿ ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ರನ್‌ವೇಯಿಂದ ಸ್ಕಿಡ್ ಆಗಿರುವ ಸಾಧ್ಯತೆಗಳಿವೆ. ಈ ಸಂಬಂಧ ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಕಿಮ್ ತಿಳಿಸಿದ್ದಾರೆ. ಲ್ಯಾಂಡಿಂಗ್ ವೇಳೆ ಯಾವುದಾದರೂ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆಯಾ ಎಂಬುದರ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದುರಂತಕ್ಕೆ ಪಕ್ಷಿಗಳ ದಾಳಿ ಕಾರಣ
ಇನ್ನು ಈ ಭೀಕರ ವಿಮಾನ ಅಪಘಾತಕ್ಕೆ ಪಕ್ಷಿಗಳ ದಾಳಿ ಕಾರಣ ಎಂದು ಶಂಕಿಸಲಾಗುತ್ತಿದ್ದು, ವಿಮಾನ ಪತನಕ್ಕೂ ಮುನ್ನ ವಿಮಾನದ ಪೈಲಟ್ ವಾಯುಗೋಪುರಕ್ಕೆ ‘ಮೇಡೇ’ ತುರ್ತು ಸಂದೇಶ ರವಾನಿಸಿದ್ದ. ವಿಮಾನದ ಎಂಜಿನ್ ಗೆ ಪಕ್ಷಿಗಳು ಢಿಕ್ಕಿಯಾಗಿ ಅದು ವಿಫಲವಾಗಿತ್ತು. ಈ ವೇಳೆ ಪೈಲಟ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ ತುರ್ತು ಲ್ಯಾಂಡಿಂಗ್ ಗೆ ಮುಂದಾಗಿದ್ದರು.
ವಾಯುಗೋಪುರದಿಂದಲೂ ಲ್ಯಾಂಡಿಂಗ್ ಅನುಮತಿ ದೊರೆತಿದ್ದಾರೂ ಪೈಲಟ್ ಲ್ಯಾಂಡಿಂಗ್ ಗೆ ಸುಮಾರು ಮೂರು ನಿಮಿಷಗಳನ್ನು ತೆಗೆದುಕೊಂಡಿದ್ದ. ಕಾರಣ ಈ ವೇಳೆ ವಿಮಾನದ ಲ್ಯಾಂಡಿಂಗ್ ಗೇರ್ ಕೂಡ ವಿಫಲವಾದ ಹಿನ್ನಲೆಯಲ್ಲಿ ಪೈಲಟ್ ಮುವಾನ್ ವಿಮಾನವನ್ನು ಬೆಲ್ಲಿ ಲ್ಯಾಂಡಿಂಗ್ ಮಾಡಲು ಮುಂದಾಗಿದ್ದ. ಆದರೆ ಬೆಲ್ಲಿ ಲ್ಯಾಂಡಿಂಗ್ ವಿಫಲವಾಗಿ ವಿಮಾನ ನೇರವಾಗಿ ಹೋಗಿ ನಿಲ್ದಾಣದ ತಡೆಗೋಡೆಗೆ ಡಿಕ್ಕಿಯಾಗಿ ಸ್ಫೋಟಗೊಂಡಿದೆ ಎನ್ನಲಾಗಿದೆ.
ವಿಮಾನ ಸಂಪೂರ್ಣ ಸುಟ್ಟು ಕರಕಲಾಗಿದೆ
ಈ ಘಟನೆ ಕುರಿತು ಸ್ಥಳೀಯ ಸುದ್ದಿ ಸಂಸ್ಥೆ ಮಾತನಾಡಿರುವ ಅಗ್ನಿಶಾಮಕದಳದ ಸಿಬ್ಬಂದಿ, ವಿಮಾನ ಸಂಪೂರ್ಣ ಸುಟ್ಟು ಕರಕಲಾಗಿದೆ. ಶವಗಳನ್ನು ಗುರುತಿಸೋದು ಕಷ್ಟವಾಗಿದೆ. ಸದ್ಯ 167 ಶವಗಳನ್ನು ಹೊರ ತೆಗೆಯಲಾಗಿದ್ದು, ಇವುಗಳನ್ನು ಇರಿಸಲು ತಾತ್ಕಾಲಿಕ ಶವಾಗಾರಗಳನ್ನು ತೆಗೆಯಲಾಗಿದೆ. ಒಂದು ವಿಮಾನ ಗೋಡೆಗೆ ಡಿಕ್ಕಿಯಾದ ನಂತರ ಬೆಂಕಿ ಕಾಣಿಸಿಕೊಳ್ಳದಿದ್ದರೆ, ಹಿಂಬಾಗಿಲಿನಿಂದ ಪ್ರಯಾಣಿಕರನ್ನು ರಕ್ಷಣೆ ಮಾಡಬಹುದಿತ್ತು. ಆದರೆ ಬೆಂಕಿಯ ತೀವ್ರತೆ ಅಧಿಕವಾಗಿತ್ತು ಎಂದು ಹೇಳಿದ್ದಾರೆ.
ವಿಮಾನ ಪತನವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಎಮೆರ್ಜೆನ್ಸಿ ಸಿಬ್ಬಂದಿಯಿಂದಲೇ ಇಬ್ಬರ ಜೀವ ಉಳಿದಿದೆ ಎಂದು ವರದಿಯಾಗಿದೆ. ಇದರಲ್ಲಿ ಒಬ್ಬರು ಸಿಬ್ಬಂದಿ, ಮತ್ತೊಬ್ಬರು ಪ್ರಯಾಣಿಕರು ಎಂದು ಹೇಳಲಾಗುತ್ತಿದ್ದು, ಇಬ್ಬರ ಹೆಸರನ್ನು ಬಹಿರಂಗಪಡಿಸಿಲ್ಲ,