ಹೊಸದಿಗಂತ ವರದಿ,ಮಡಿಕೇರಿ:
ಹಾಕಿ ಇಂಡಿಯಾ ವತಿಯಿಂದ ಏರ್ಪಡಿಸಲಾಗಿದ್ದ ಪ್ರಥಮ ದಕ್ಷಿಣ ವಲಯ ಸಬ್ ಜೂನಿಯರ್ ಬಾಲಕ ಹಾಗೂ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಬಹುತೇಕ ಕೊಡಗು ಜಿಲ್ಲೆಯ ಆಟಗಾರರನ್ನೊಳಗೊಂಡ ಹಾಕಿ ಕರ್ನಾಟಕ ಬಾಲಕರ ತಂಡ ಚಾಂಪಿಯನ್ ಪಟ್ಟ ಗಳಿಸುವುದರೊಂದಿಗೆ ಚಿನ್ನದ ಬಹುಮಾನಕ್ಕೆ ಮುತ್ತಿಕ್ಕಿದೆ.
ತಮಿಳುನಾಡಿನ ಚೆನ್ನೈ ಎಗ್ಮೋರ್‌ನ ರಾಧಾಕೃಷ್ಣ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯಾವಳಿಯಲ್ಲಿ ತಮಿಳುನಾಡು ಹಾಕಿ ತಂಡವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟ ಗಳಿಸಿತು.
ತಂಡದ ಪರವಾಗಿ ನಿಶಾಂತ್ ಎಂ., ಜಶನ್ ದೇವಯ್ಯ ಹಾಗೂ ರೋಹಿತ್ ಗೋಲು ದಾಖಲಿಸಿ ತಂಡಕ್ಕೆ ಜಯ ತಂದು ಕೊಟ್ಟರು. ಸುಪ್ರಿತ್ ಜೆ. ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ತೆಲಂಗಾಣ ಹಾಕಿ ವಿರುದ್ಧ 9-0 ಗೋಲುಗಳ ಅಂತರದಿಂದ ಜಯಗಳಿಸಿ ಫೈನಲ್ ಪ್ರವೇಶಿಸಿತ್ತು. ಕರ್ನಾಟಕ ತಂಡದ ಪರ ಮೇವಡ ಜಶನ್ ತಮ್ಮಯ್ಯ ಹಾಗೂ ಸುಪ್ರಿತ್ ಜೆ. ತಲಾ ಮೂರು ಗೋಲು ಬಾರಿಸಿದರೆ, ಹೆಚ್.ಹೆಚ್.ದೀಕ್ಷಿತ್ 2, ನಮನ್ ಒಂದು ಗೋಲು ಬಾರಿಸಿ ತಂಡಕ್ಕೆ ಜಯ ತಂದು ಕೊಟ್ಟರು. ಮಲ್ಲು ಸುನಗಾರ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.
ಆಟಗಾರರು
ಬಾಲಕರ ತಂಡದಲ್ಲಿ ಜಿಲ್ಲೆಯ ಆಟಗಾರರಾದ ನಿಶಾಂತ್ ಎಂ., ದೀಕ್ಷಿತ್ ಹೆಚ್.ಹೆಚ್., ಮಂಡೇಟಿರ ಸೋಹನ್ ಕಾರ್ಯಪ್ಪ, ಪೊಡನೋಳಂಡ ತನಿಶ್ ಮಾದಪ್ಪ, ಕುಡೆಕಲ್ ನಿಹಾಲ್, ಶಶಿತ್ ಗೌಡ, ಅರಮಣಮಾಡ ನಮನ್ ಬೆಳ್ಯಪ್ಪ, ಮೇವಡ ಜಶನ್ ತಮ್ಮಯ್ಯ, ಚಿರಾಗ್ ಕೋಟ್ಯಾನ್, ಸಮರ್ಥ್ ನಾಯಕ್, ಧುನುಷ್, ಶ್ರೇಯಸ್ ಕೆ.ಎಂ., ಹಾಗೂ ಬೆಂಗಳೂರಿನ ಸುಪ್ರಿತ್ ಜೆ.(ನಾಯಕ), ಹಾಸನದ ನಿಖಿಲ್ ಗೌಡ, ಶಿವಮೊಗ್ಗದ ತೇಜಸ್ ರಾಜಶೇಖರ್ ಪವಾರ್, ಗದಗದ ಮಲ್ಲು ಸುನಗಾರ್, ಬಾಗಲಕೋಟೆಯ ರೋಹಿತ್ ಕಖಾಂಡಕಿ, ಧನುಷ್ ಜಿ., ವಿವಿನ್ ದೊಡ್ಮನೆ ಪಾಲ್ಗೊಂಡಿದ್ದರು. ತರಬೇತುದಾರರಾಗಿ ಹಾಕಿ ಕರ್ನಾಟಕದ ಎಂ.ಅರುಣ್, ವ್ಯಸ್ಥಾಪಕರಾಗಿ ಕೃಷ್ಣಾ ರೆಡ್ಡಿ ಕಾರ್ಯನಿರ್ವಹಿಸಿದರು.
ಬಾಲಕಿಯರ ತಂಡಕ್ಕೆ ಕಂಚು: ಬಾಲಕಿಯರ ವಿಭಾಗದಲ್ಲಿ ಹಾಕಿ ಕರ್ನಾಟಕ ಬಾಲಕಿಯರ ತಂಡ ಆಂಧ್ರ ಪ್ರದೇಶ ಹಾಕಿ ತಂಡದ ಎದುರು ಮೂರನೇ ಸ್ಥಾನಕ್ಕೆ ಆಟವಾಡಿ 3-2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಕಂಚಿನ ಪದಕ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ಕೇರಳ ಹಾಕಿ ತಂಡದೆದುರು 8-1 ಗೋಲುಗಳ ಅಂತರದಿಂದ ಜಯಗಳಿಸಿತ್ತು. ಆದರೆ ಅಂಕಪಟ್ಟಿಯಲ್ಲಿ ಹಿನ್ನಡೆ ಸಾಧಿಸಿದ್ದರಿಂದ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.
ಬಾಲಕಿಯರ ತಂಡದಲ್ಲಿ ಕೊಡಗು ಜಿಲ್ಲೆಯ ಆಟಗಾರ್ತಿಯರಾದ ಶಿವಚಾಳಿಯಂಡ ದೇಚಕ್ಕ, ಚಟ್ಟಂಡ ಲಿಪ್ಷಿಕಾ, ಕುಟ್ಟನ ಅಕ್ಷರ, ಚೆಯ್ಯಂಡ ತ್ವಿಶಾ ದೇಚಮ್ಮ, ಅಚ್ಚಪಂಡ ಪರ್ಲಿನ್ ಪೊನ್ನಮ್ಮ, ಕೀತಿಯಂಡ ಪೂರ್ವಿ ಪೂವಮ್ಮ, ಪಿ.ಕೆ. ನಿರೀಕ್ಷಾ, ವಿದ್ಯಾಶ್ರಿ, ಟಿ.ಎಸ್ ಗಗನ, ಎಂ.ಎಸ್.ಧನ್ಯಾ,, ಪ್ರತೀಕ್ಷಾ ಕೋಟ್ಯಾನ್ ಹಾಗೂ ಹಾಸನದ ಲಕ್ಷ್ಮಿ, ಸಿಂಚನಾ ರಾಜ್, ಅಕ್ಷತಾ ಹೆಚ್.ಸಿ., ಪಣಿತಾ ಎಸ್., ದೀಪ್ತಿ ಕೆ.ಆರ್., ಭಾವನಾ ಬೆಂಗಳೂರಿನ ವೈಷ್ಣವಿ ಭಾಗವಹಿಸಿದ್ದರು. ತರಬೇತುದಾರರಾಗಿ ಹಾಕಿ ಕರ್ನಾಟಕದ ಹರೀಶ್ ಕಾರ್ಯನಿರ್ವಹಿಸಿದರು.