ಹೊಸದಿಗಂತ ವರದಿ, ಮಂಗಳೂರು:
ಸುರೇಶ್ ಡಿ. ಪಳ್ಳಿ
ಮಂಗಳೂರಿನಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹ ಸದಾ ಸುದ್ದಿಯಲ್ಲಿರುವ ಜೈಲು. ಗಾಂಜಾ, ಮೊಬೈಲ್ ಸೇರಿದಂತೆ ಮಾದಕ ದ್ರವ್ಯಗಳ ಪತ್ತೆ, ಕೈದಿಗಳ ಹೊಡೆದಾಟ, ಆತ್ಮಹತ್ಯೆ ಯತ್ನ ಪ್ರಕರಣಗಳು ಹೀಗೆ ಒಂದಲ್ಲಾ ಒಂದು ಪ್ರಕರಣಗಳು ಇಲ್ಲಿ ಬೆಳಕಿಗೆ ಬರುತ್ತಲೇ ಇರುತ್ತವೆ. ಕೆಲದಿನಗಳ ಹಿಂದೆ ಅಪರಿಚಿತ ವ್ಯಕ್ತಿಗಳಿಬ್ಬರು ಅನುಮಾನಾಸ್ಪದ ರೀತಿಯ ವಸ್ತುಗಳನ್ನು ಜೈಲ್‌ನೊಳಗೆ ಎಸೆದ ವೀಡಿಯೊ ವೈರಲ್ ಆಗುವ ಮೂಲಕ ಈ ಜೈಲಿನ ಅವ್ಯವಸ್ಥೆ ಮತ್ತಷ್ಟು ಬಯಲಾಗಿತ್ತು. ಮಾ.5 ರಂದು 349 ಮಂದಿ ಕೈದಿಗಳು ಫುಡ್ ಪಾಯ್ಸನ್‌ನಿಂದ ಬಳಲಿದ್ದರು. ಇಂತಿಪ್ಪ ಕಾರಾಗೃಹದಲ್ಲಿ ಸದ್ಯ ಬರೋಬ್ಬರಿ 352 ಕೈದಿಗಳಿದ್ದಾರೆ.
ಅಬ್ಬಾ! ಇಷ್ಟೊಂದು ಸಂಖ್ಯೆಯ ಕೈದಿಗಳಿದ್ದಾರೆಯೇ ಎಂದು ಅಚ್ಚರಿ ಪಡಬೇಕಿಲ್ಲ. ಇಲ್ಲಿ ಲೆಕ್ಕಕ್ಕಿಂತ ಜಾಸ್ತಿಯೇ ಕೈದಿಗಳಿದ್ದಾರೆ. ಏನೇ ಪ್ರಕರಣಗಳು ನಡೆದರೂ ಆರೋಪಿಗಳನ್ನು ತಂದು ದಬ್ಬುವುದು ಈ ಜೈಲಿನೊಳಗೆಯೇ. ಇದರಿಂದಾಗಿ ಜೈಲು ತುಂಬಿ ತುಳುಕುತ್ತಿದೆ.
21 ಮಂದಿ ಮಹಿಳಾ ಕೈದಿಗಳಿದ್ದಾರೆ
ಮಂಗಳೂರು ಜೈಲಿನಲ್ಲಿ ಮಹಿಳೆ ಮತ್ತು ಪುರುಷ ಕೈದಿಗಳು ಸೇರಿ ಒಟ್ಟು 210 ಮಂದಿಗೆ ಸ್ಥಳಾವಕಾಶ ವ್ಯವಸ್ಥೆ ಇದೆ. ಆದರೆ ಇಲ್ಲಿರುವ ಕೈದಿಗಳ ಸಂಖ್ಯೆ ಮಾತ್ರ 356.ಲೆಕ್ಕಕ್ಕಿಂತ ಹೆಚ್ಚೇ ಇಲ್ಲಿ ಕೈದಿಗಳನ್ನು ತುಂಬಲಾಗಿದೆ. ತುಂಬದೆ ಇಲಾಖೆಗೆ ಬೇರೆ ವಿಧಿಯೂ ಇಲ್ಲ!. 10 ಮಂದಿ ಮಹಿಳಾ ಕೈದಿಗಳಿರಬೇಕಾದ ಜಾಗದಲ್ಲಿ 21 ಮಂದಿ ಇದ್ದಾರೆ. 200 ಪುರುಷ ಕೈದಿಗಳಿಗಷ್ಟೇ ವ್ಯವಸ್ಥೆಯಿದ್ದರೂ 331 ಮಂದಿ ಜೈಲಿನಲ್ಲಿದ್ದಾರೆ.
ಅತೀಸೂಕ್ಷ್ಮ ಕಾರಾಗೃಹವಿದು
ಮಂಗಳೂರು ಜೈಲು ಅತೀಸೂಕ್ಷ್ಮ ಕಾರಾಗೃಹವೆಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿದೆ. ಗುಂಪುಗಳ ನಡುವೆ ಹೊಡೆದಾಟ ಅಥವಾ ಇನ್ನಿತರ ಅಹಿತಕರ ಘಟನೆಗಳು ನಡೆದಾಗ ಅವರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ. ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತಂತೆ ಎಂಎಲ್‌ಸಿ ಐವನ್ ಡಿಸೋಜ ಅವರು ಪ್ರಶ್ನೆಯೊಂದನ್ನು ಕೇಳಿದ್ದರು. ‘ಕಾರಾಗೃಹದಲ್ಲಿ ಧರ್ಮದ ಆಧಾರದಲ್ಲಿ ಕೈದಿಗಳಿಗೆ ವಿಭಾಗವನ್ನು ಮಾಡಿ ಆಯಾ ಧರ್ಮದ ಹೆಸರಿನಲ್ಲಿ ಕೈದಿಗಳನ್ನು ಇರಿಸಿಲಾಗಿದೆ ಎಂಬ ವರದಿ ನಿಜವೇ’? ಎಂದು ಅವರು ಪ್ರಶ್ನ್ನಿಸಿದ್ದರು. ಈ ಪ್ರಶ್ನೆಗೆ ಕಾರಾಗೃಹದಲ್ಲಿ ಧರ್ಮದ ಹೆಸರಿನಲ್ಲಿ ಕೈದಿಗಳ ವಿಭಾಗ ಮಾಡಲಾಗಿಲ್ಲ. ವಿರೋಧಿ ಗುಂಪುಗಳ ಬಂಧಿಗಳು ಹೆಚ್ಚಾಗಿ ದಾಖಲಾಗುವುದರಿಂದ ಅಹಿತಕರ ಘಟನೆಗಳನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಮತ್ತು ಭದ್ರತೆಯ ಹಿತದೃಷ್ಟಿಯಿಂದ ವಿರೋಧಿ ಗುಂಪಿನ ಬಂಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಉತ್ತರಿಸಿದ್ದಾರೆ.
ಜೈಲ್ ಶಿಫ್ಟ್ ಗೆ ಕೂಡಿ ಬಂದಿಲ್ಲ ಕಾಲ
ಮಂಗಳೂರು ಜೈಲಿನಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದೇ ಇರುವುದರಿಂದ ನಗರದಿಂದ ಗ್ರಾಮಾಂತರಕ್ಕೆ ಶಿಫ್ಟ್ ಮಾಡುವ ಪ್ರಕ್ರಿಯೆಗಳು ನಡೆಯುತ್ತಲೇ ಇವೆ. ಬಂಟ್ವಾಳ ತಾಲೂಕಿನ ಚೇಳೂರು ಮತ್ತು ಕುರ್ನಾಡಿನಲ್ಲಿ ಒಟ್ಟು 63 ಎಕರೆ 89 ಸೆಂಟ್ಸ್ ಜಮೀನು ಮಂಜೂರು ಮಾಡಲಾಗಿದ್ದು, ಸದ್ಯ 211.66 ಲಕ್ಷ ವೆಚ್ಚದಲ್ಲಿ ಕಂಪೌಂಡ್ ಗೋಡೆ ನಿರ್ಮಿಸಲಾಗಿದೆ. ಇಲ್ಲಿ 1009 ಕೈದಿಗಳನ್ನು ಇರಿಸಲು ನೂತನ ಕೇಂದ್ರ ಕಾರಾಗೃಹ ನಿರ್ಮಾಣವಾಗಲಿದೆ. 2018ರಲ್ಲಿಯೇ ಈ ಕಾರಾಗೃಹಕ್ಕೆ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ. ಆದರೆ ಇನ್ನೂ ವೇಗಪಡೆದುಕೊಂಡಿಲ್ಲ.
ಕಾರಾಗೃಹದ ಸುತ್ತ 24*7 ಗಸ್ತು
ಇತ್ತೇಚೆಗೆ ಜೈಲಿನ ಕಂಪೌಂಡ್ ಗೋಡೆಯಿಂದ ಅಪರಿಚಿತ ವ್ಯಕ್ತಿಗಳು ಅನುಮಾನಾಸ್ಪದ ವಸ್ತುಗಳನ್ನು ಎಸೆದ ಪ್ರಕರಣದ ಬಳಿಕ ಜೈಲಿನ ಸುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕೆಎಸ್‌ಐಎಸ್‌ಎ- ಸಿಬ್ಬಂದಿಗಳು ದಿನದ 24ಗಂಟೆಯೂ ವಿವಿಧ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಕಳೆದ ಕೆಲವು ದಿನಗಳಿಂದ ಕಾರಾಗೃಹಕ್ಕೆ ಬರುವ ಪ್ರತಿಯೊಬ್ಬರ ಮೇಲೂ ತೀವ್ರ ನಿಗಾ ಇಡಲಾಗುತ್ತಿದೆ. ಎಲ್ಲಾ ವ್ಯಕ್ತಿಗಳನ್ನು ಭದ್ರತಾ ಉಪಕರಣಗಳು ಮತ್ತು ಬ್ಯಾಗೇಜ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಲಾಗುತ್ತಿದೆ. ಡೀಪ್ ಸರ್ಚ್ ಮೆಟಲ್ ಡಿಟೆಕ್ಟರ್, ಎಚ್‌ಎಚ್‌ಎಂಡಿ, ಎಪ್‌ಜಿ-1 ಸೆಕ್ಯುರಿಟಿ ಪೋಲ್, ಜಿಎ-ಎಂಡಿ ಆಂಡ್ ಬಾಡಿ ವಾರ್ನ್ ಕ್ಯಾಮೆರಾಗಳ ಮೂಲಕ ತಪಾಸಣೆಗೆ ಆದ್ಯತೆ ನೀಡಲಾಗಿದೆ. ಜೈಲಿನಲ್ಲಿ ಅಧಿಕಾರಿಗಳ ತಪಾಸಣೆ ವೇಳೆ ನಿಷೇಧಿತ ವಸ್ತುಗಳು ದೊರೆತ 9 ಪ್ರಕರಣಗಳು ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.