ರಾಜ್ಯದ ಪ್ರತಿ ಜಿಲ್ಲೆ , ನಗರ ವ್ಯಾಪ್ತಿಯಲ್ಲಿ ವಿಶೇಷ ಸೈಬರ್ ಪೊಲೀಸ್ ಠಾಣೆ: ಸಚಿವ ಆರಗ ಜ್ಞಾನೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ 8 ಹಾಗೂ ಪ್ರತಿ ಜಿಲ್ಲೆ ಹಾಗೂ ನಗರ ವ್ಯಾಪ್ತಿಯಲ್ಲಿ ವಿಶೇಷ ಸೈಬರ್ ಪೊಲೀಸ್ ಠಾಣೆಗಳನ್ನು ತೆರೆದು, ಅಪರಾಧ ಪತ್ತೆ ಹಚ್ಚಲು ಸೈಬರ್ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಪರಿಷಟ್ ನಲ್ಲಿ ಮಾಹಿತಿ ನೀಡಿದರು.

ಪ್ರಶ್ನೋತ್ತರ ವೇಳೆಯಲ್ಲಿ ಮಾಹಿತಿ ನೀಡಿದ ಅವರು, ಪೊಲೀಸರಿಗೆ ಆಧುನಿಕ ತರಬೇತಿ ನೀಡಲು ಸಿ.ಐ.ಡಿ ಘಟಕದಲ್ಲಿ ವಿಶೇಷ ತರಬೇತಿ ವಿಭಾಗವನ್ನು ಸ್ಥಾಪಿಸಲಾಗಿದೆ. ಒಟ್ಟು 3657 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, ಸರ್ಕಾರಿ ಅಭಿಯೋಜಕರು, ಇನ್ನಿತರೆ ಕಾನೂನು ಜಾರಿ ಸಂಸ್ಥೆಗಳಿಗೆ ತರಬೇತಿ ನೀಡಲಾಗಿದೆ. ಅದೇ ರೀತಿ ರಾಜ್ಯದ ಗೃಹ ಇಲಾಖೆ ಗುಜರಾತಿನ ಅಹಮದಬಾದ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲಿ ರಾಜ್ಯದ ಆಸಕ್ತ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕೊಡಿಸಿ ನೇಮಕಾತಿ ಮಾಡಲಾಗಿದೆ ಎಂದರು.

ಕೇಂದ್ರ ಸರ್ಕಾರ ಸೈಬರ್ ದೂರುಗಳನ್ನು ದಾಖಲಿಸಲು ನ್ಯಾಶನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಸ್ಥಾಪಿಸಿದೆ. ಇದರಲ್ಲಿ ರಾಜ್ಯಕ್ಕೆ ಸಂಬಂಧಿಸಿ ಒಟ್ಟು 80,379 ದೂರುಗಳು ದಾಖಲಾಗಿವೆ. 53,229 ದೂರುಗಳು ಪರಿಶೀಲನಾ ಹಂತದಲ್ಲಿವೆ. 14,960 ದೂರುಗಳನ್ನು ಪರಿಶೀಲಿಸಿ ಮುಕ್ತಾಯಗೊಳಿಸಲಾಗಿದೆ.901 ದೂರುಗಳು ತಿರಸ್ಕರಿಸಲ್ಪಟ್ಟಿವೆ. 5,734 ಪ್ರಕರಣಗಳ ವಿಚಾರಣೆ ಬಾಕಿಯಿದೆ. ಒಟ್ಟು 528 ಪ್ರಕರಣಗಲ್ಲಿ ಎಪ್.ಐ.ಆರ್. ದಾಖಲಿಸಲಾಗಿದೆ.2,028 ಪ್ರಕರಣಗಳ ದೂರುದಾರರು ಹಿಂಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!