ಹೊಸದಿಗಂತ ವರದಿ, ಹುಬ್ಬಳ್ಳಿ:
-
ವಿಠ್ಠಲದಾಸ ಕಾಮತ್
ಜೈನ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ ಜೈನ ಸಮಾಜದ ವತಿಯಿಂದ ಇಂದು ( ಬುಧವಾರ) ರಾಜ್ಯ ಸರ್ಕಾರಕ್ಕೆ ಕೊನೆಯ ಮನವಿ ಸಲ್ಲಿಸುತ್ತೇವೆ. ನಂತರ ನಮ್ಮದು ಏನಿದ್ದರೂ ಪ್ರತಿಭಟನೆಯ ದಾರಿ ಹಿಡಿಯೋದು. ಸರ್ಕಾರ ಮತ್ತೂ ನಮ್ಮ ಬೇಡಿಕೆ ಬಗ್ಗೆ ತಾತ್ಸಾರ ಮನೋಭಾವ ಪ್ರದರ್ಶಿಸಿದರೆ ನನ್ನ ಕೊನೆಯ ದಾರಿ ಸಲ್ಲೇಖನದ ಮೂಲಕ ದೇಹ ತ್ಯಾಗ ಮಾಡೋದು ಎಂದು ವರೂರಿನ ಶ್ರೀ ಗುಣಧರನಂದಿ ಮಹಾರಾಜರು ಬೇಸರದಿಂದ ನುಡಿದಿದ್ದಾರೆ.
ಜೈನ ಸಮುದಾಯದ ಅಭಿವೃದ್ದಿಗಾಗಿ ಜೈನ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಸುದೀರ್ಘ ಹೋರಾಟ ನಡೆಸಿಕೊಂಡು ಬಂದಿರುವ ಮುನಿಗಳು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ತೀವ್ರ ನೊಂದಿದ್ದಾರೆ. ಚಿಕ್ಕ ಸಮುದಾಯವಾದರೂ ರಾಜಕೀಯವಾಗಿ ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿರುವ ಜೈನರು ಅಲ್ಪಸಂಖ್ಯಾತ ವರ್ಗಕ್ಕೆ ಬಂದರೂ ತಮ್ಮ ಸಮುದಾಯದ ಬಗ್ಗೆ ಆಳುವವರಿಗೆ ಇರುವ ತಾತ್ಸಾರದ ಬಗ್ಗೆ ಇವರಲ್ಲಿ ಬೇಸರವಿದೆ.
ಜೈನ ಸಮುದಾಯದ ಬೇಡಿಕೆಗಳು ಮತ್ತಿತರ ಸಮಸ್ಯೆಗಳ ಹಿನ್ನೆಲೆಯಲ್ಲಿ ಹೊಸದಿಗಂತ ಶ್ರೀ ಗುಣಧರನಂದಿ ಮಹಾರಾಜರು ಮಾತನಾಡಿಸಿತು.
ಪ್ರಶ್ನೆ : ರಾಜ್ಯ ಸರ್ಕಾರಕ್ಕೆ ಜೈನ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಆಗ್ರಹಿಸಿ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಮತ್ತು ಸಲ್ಲೇಖನ ವೃತ ಕೈಗೊಳ್ಳುವ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದೀರಿ. ಸರ್ಕಾರದ ಕಡೆಯಿಂದ ಯಾರಾದರೂ ಸಂಪರ್ಕಿಸಿದರೇ ?
– ಸರ್ಕಾರ ಅಂದ್ರೆ, ಕಾಂಗ್ರೆಸ್ಸಿನ ಕೆಲ ನಾಯಕರು ನನ್ನನ್ನು ಸಂಪರ್ಕಿಸಿ ಬೇಡಿಕೆ ಖಂಡಿತ ಈಡೇರಲಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೈಲ್ ಸರ್ಕಾರದ ಮುಂದಿದೆ ಎಂದಿದ್ದಾರೆ. ಇಂತಹ ಮಾತನ್ನು ನಾವು ಹಲವಾರು ಬಾರಿ ಕೇಳಿದ್ದೇವೆ. ಆದರೆ ಇದರಲ್ಲಿ ನಮಗೆ ನಂಬಿಕೆ ಬರುತ್ತಿಲ್ಲ. ಗೃಹ ಸಚಿವ ಜಿ. ಪರಮೇಶ್ವರ ಅವರು ಸ್ವತ: ಎರಡು ವರ್ಷಗಳ ಹಿಂದೆ ನಾನು ಸತ್ಯಾಗ್ರಹ ಮಾಡುವಲ್ಲಿ ಬಂದು ಒಂದೇ ವಾರದಲ್ಲಿ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಏನಾಯ್ತು ? ನಮ್ಮ ಸಮುದಾಯದ ಪ್ರಮುಖರು, ನಮ್ಮ ಸಮುದಾಯದ ಶಾಸಕರು, ಜನಪ್ರತಿನಿಧಿಗಳು ಮುಖ್ಯಮಂತ್ರಿಯವರನ್ನು, ಸಂಬಂಧಪಟ್ಟ ಸಚಿವರನ್ನು ಹಲವಾರು ಬಾರಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಕೇವಲ ಭರವಸೆ ನೀಡಿದ್ದಾರೆ ಹೊರತು, ಏನೂ ಮಾಡಿಲ್ಲ. ಜೈನರೆಂದರೆ ಅಷ್ಟೊಂದು ತಾತ್ಸಾರ ಇವರಿಗೆಲ್ಲ. ಮುಸ್ಲಿಮರು, ಕ್ರೈಸ್ತರ ಬೇಡಿಕೆ ಈಡೇರಿಕೆಗೆ ತುದಿಗಾಲ ಮೇಲೆ ನಿಲ್ಲುವ ಇವರಿಗೆಲ್ಲ ಅದೇ ಅಲ್ಪಸಂಖ್ಯಾತ ವರ್ಗದಲ್ಲಿ ಬರುವ ಜೈನರ ಬಗ್ಗೆ ಗೌರವ ಏಕಿಲ್ಲ ಎನ್ನುವುದೇ ನನ್ನ ಪ್ರಶ್ನೆ.
ಪ್ರಶ್ನೆ : ಯಾಕೆ ಈ ರೀತಿ ಜೈನರ ಬೇಡಿಕೆ ಬಗ್ಗೆ ತಾತ್ಸಾರ ಮಾಡುತ್ತಿದ್ದಾರೆ ?
-ಸ್ವತಂತ್ರ ಭಾರತದಲ್ಲಿ ಜೈನರು ಯಾವುದಾದರೂ ಬೇಡಿಕೆಯನ್ನು ಸರ್ಕಾರದ ಮುಂದೆ ಇರಿಸಿದ್ದನ್ನು ಕೇಳಿದ್ದೀರಾ ? ನಾವು ಇರಿಸಿದ್ದು ಇದೊಂದೇ ಬೇಡಿಕೆ. ಜೈನ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಮನವಿ ಮಾಡುತ್ತಿದ್ದೇವೆ. ಇದಕ್ಕೂ ಸ್ಪಂದಿಸದಿದ್ದರೆ ಹೇಗೆ? ಸರ್ಕಾರ ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರು ಎಂದು ತಿಳಿದಿದ್ದಾರೆ. ನಾವೂ ಅಲ್ಪಸಂಖ್ಯಾತರಾಗಿದ್ದು ನಮ್ಮ ಬೇಡಿಕೆಗೆ ಸ್ಪಂದನೆ ಏಕಿಲ್ಲ ? ಜೈನರೆಂದರೆ ಇಂತಹ ತಾತ್ಸರ ಏಕೆಂದು ಉತ್ತರಿಸಬೇಕಲ್ವ.
ಪ್ರಶ್ನೆ : ಜೈನ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದರಿಂದ ಆಗುವ ಲಾಭವಾದ್ರೂ ಏನು ?
– ಅಲ್ಪಸಂಖ್ಯಾತರ ಹೆಸರಲ್ಲಿ ಗುಮಾಸ್ತನಿಂದ, ಮಂತ್ರಿಯವರೆಗೆ ಆದ್ಯತೆ ಕೊಡುವುದು ಕೇವಲ ಮುಸ್ಲಿಮರಿಗೆ ಮಾತ್ರ. ನನ್ನ ಜೊತೆ ಮುಸ್ಲಿಮರು ಚೆನ್ನಾಗಿ ಇದಾರೆ, ಸಾವಿರಾರು ಮುಸ್ಲಿಂ ವಿದ್ಯಾರ್ಥಿಗಳು ನಮ್ಮಲ್ಲಿ ಕಲಿಯುತ್ತಿದ್ದಾರೆ. ಆದರೆ ಮೇಲ್ಮಟ್ಟದಲ್ಲಿ ಮುಸ್ಲಿಮರಿಗೆ ಸಿಗುವ ಆದ್ಯತೆ ಜೈನರಿಗೆ ಇಲ್ಲ. ಇದು ವಿಷಾದನೀಯ.
ಬಜೆಟ್ಟಿನಲ್ಲಿ ಹಜ್ ಯಾತ್ರಿಕರಿಗೆ ೫೦ ಸಾವಿರ ರೂ. ನೀಡಿದ್ದಾರೆ. ನಮಗೆ ಒಂದು ಸಾವಿರ ರೂ. ಇಲ್ಲ. ಅಲ್ಪಸಂಖ್ಯಾತರ ಕೋಟಾದಲ್ಲಿ ಮುಸ್ಲಿಮರಿಗೆ ಎಷ್ಟು ಸಾವಿರ ಕೋಟಿ ಕೊಟ್ಟಿದ್ದಾರೆ ಗೊತ್ತಲ್ಲ. ಕ್ರೈಸ್ತರಿಗೆ ೨೫೦ ಕೋಟಿ ಕೊಟ್ಟಿದ್ದಾರೆ. ೨೫ ಲಕ್ಷ ಇರುವ ಜೈನ ಸಮುದಾಯಕ್ಕೆ ಕೊಟ್ಟಿದ್ದು ಕೇವಲ ೩೦ ಕೋಟಿ ರೂ. ಇದರಿಂದ ಏನು ಮಾಡಲು ಸಾಧ್ಯ ಹೇಳಿ ? ಇಂತಹ ತಾರತಮ್ಯ ನಿವಾರಣೆ ಆಗಬೇಕಲ್ಲವೇ? ಜೈನ ಅಭಿವೃದ್ಧಿ ಮಂಡಳಿ ಸ್ಥಾಪನೆಯಿಂದ ಇದುವರೆಗೂ ಜೈನರ ಗುಡಿಗುಡಾರಗಳ ಅಭಿವೃದ್ದಿಗೆ ಸಿಗುತ್ತಿದ್ದ ನೆರವನ್ನು ಮುಂದೆ ಜೈನ ಜನಸಾಮಾನ್ಯರ ಅಭಿವೃದ್ದಿಗೂ ತರಬಹುದು. ಜೈನರದ್ದೇ ನಿಗಮ ಆಗುವುದರಿಂದ ನಮ್ಮ ಬೇಕು, ಬೇಡ ನಿರ್ಧರಿಸಿ ಅಭಿವೃದ್ದಿ ಮಾಡಬಹುದು. ಎಲ್ಲರದ್ದೂ ಆಗಿದೆ, ನಮಗೆ ಮಾತ್ರ ಇಂತಹ ವಿಳಂಬ ಏಕೆ ?
ಪ್ರಶ್ನೆ : ತಮ್ಮ ಬೇಡಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಆಗಿದ್ದೀರಾ ?
– ನಮ್ಮ ಸಮುದಾಯದ ಶಾಸಕರು, ಪ್ರಮುಖರು ಸಿದ್ದರಾಮಯ್ಯರನ್ನು ಭೇಟಿ ಆಗಿ ಮನವಿ ಮಾಡಿದ್ದಾರೆ. ಆದರೆ ಯಾಕೋ ಅವರಿಗೆ ಜೈನರ ಬಗ್ಗೆ ಅಂತಹ ಒಲವು ಇದ್ದಂತಿಲ್ಲ. ನಮ್ಮ ಮಠಕ್ಕೆ ಇದುವರೆಗಿನ ಎಲ್ಲ ಸಿಎಂ ಬಂದು ಹೋಗಿದ್ದಾರೆ. ಉಪರಾಷ್ಟ್ರಪತಿಯಿಂದ ಎಲ್ಲರೂ ಬಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಬಂದಿಲ್ಲ. ಎರಡು ಬಾರಿ ಪ್ರವಾಸಿ ವೇಳಾಪಟ್ಟಿಯಲ್ಲಿ ದಾಖಲಿಸಿ ಕೊನೆ ಘಳಿಗೆಯಲ್ಲಿ ಬಂದಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಬಂದಿದ್ದರು. ಅವರು ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ಕೊಟ್ಟು ಹೋದರು. ಬೆಳಗಾವಿ ಅಧಿವೇಶನದಲ್ಲಿ ಆಗಲಿದೆ ಎಂಬ ಭರವಸೆ ಬಂತು ,ಅದೂ ಸುಳ್ಳಾಯ್ತು. ಸಚಿವ ಸಂತೋಷ ಲಾಡ, ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್ ಎಲ್ಲರೂ ಬಂದು ಭರವಸೆ ಕೊಟ್ಟು ಹೋದವರೇ ?
ಪ್ರಶ್ನೆ : ಈಗ ನಿಮ್ಮ ಮುಂದಿನ ನಡೆ ಏನು ?
-ನಮಗಂತೂ ಸರ್ಕಾರದ ಮುಂದೆ ಕೈಚಾಚಿ ಸಾಕಾಯ್ತು. ಇಂದು ಬುಧವಾರ ನಮ್ಮ ಸಮುದಾಯದ ಪ್ರಮುಖರು ಸೇರಿ ಸರ್ಕಾರಕ್ಕೆ ಕಟ್ಟಕಡೆಯ ಮನವಿ ಸಲ್ಲಿಸುತ್ತೇವೆ. ಮುಂದೆನಿದ್ದರೂ ನಮ್ಮ ಪ್ರತಿಭಟನೆ. ಮುಂದೆ ಏಪ್ರಿಲ್ ೧೦ ರಂದು ಬರುವ ಮಹಾವೀರ ಜಯಂತಿಯನ್ನು ನಾವು ಜಯಂತಿಯಾಗಿ ಆಚರಿಸುವುದಿಲ್ಲ. ಅಂದು ಹಳ್ಳಿಹಳ್ಳಿಗಳಲ್ಲಿ ಸರ್ಕಾರದ ತಾತ್ಸಾರ ಧೋರಣೆ ವಿರುದ್ಧ ನಮ್ಮ ಜನ ಪ್ರತಿಭಟನೆ ಮಾಡಲಿದ್ದಾರೆ. ಬೇಡಿಕೆಗೆ ಸ್ಪಂದಿಸದಿದ್ದರೆ ಜೂ. ೮ ರಂದು ಬೆಳಗಾವಿಯ ಐನಾಪುರದಲ್ಲಿ ೧ಲಕ್ಷ ಜನ ಸೇರಿ ಬೃಹತ್ ಜೈನ ಸಮಾವೇಶದ ಮೂಲಕ ನಮ್ಮ ಹಕ್ಕೊತ್ತಾಯ ಮಾಡಲಿದ್ದೇವೆ. ಇದಕ್ಕೂ ಮಣಿಯದಿದ್ದರೆ ಕೊನೆಯದಾಗಿ ಸಮುದಾಯದ ಹಿತಕ್ಕಾಗಿ ನಾನು ವಿಧಾನಸೌಧದ ಎದುರು ಸಲ್ಲೇಖನ ವೃತದ ಮೂಲಕ ಅನ್ನ, ನೀರು ತ್ಯಜಿಸಿ ದೇಹ ತ್ಯಾಗಕ್ಕೆ ನಿರ್ಧರಿಸಿದ್ದೇನೆ.ನನಗಿದು ಅನಿವಾರ್ಯ. ನೋಡೋಣ ಸರ್ಕಾರ ಜೈನರನ್ನು ಎಷ್ಟು ಗೌರವಿಸುತ್ತದೆ ಅನ್ನೋದನ್ನು.
ಪ್ರಶ್ನೆ : ಜೈನರು ರಾಜಕೀಯವಾಗಿ ಇನ್ನಷ್ಟು ಪ್ರಬಲರಾಗಬೇಕೆನ್ನುತ್ತೀರಾ ?
– ಹೌದು, ಅಲ್ಪಸಂಖ್ಯಾತರ ನಿಗಮದಲ್ಲಿ ಯಾವತ್ತಾದರೂ ಜೈನರಿಗೆ ಅಧಿಕಾರ ಸಿಕ್ಕಿದೆಯೇ. ಅಲ್ಪಸಂಖ್ಯಾತರ ಬೋರ್ಡ್‌ನಲ್ಲಿ ನಮ್ಮ ಸಮುದಾಯ ಒಬ್ಬ ಸದಸ್ಯರು ಇಲ್ಲ. ಜೈನರು ೨೦- ೨೫ ಲಕ್ಷ ಇದ್ದೇವೆ. ಬೆಳಗಾವಿ ಜಿಲ್ಲೆ ಸೇರಿ ೧೫ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಮತ ನಿರ್ಣಾಯಕವಿದೆ. ಇವರೆಲ್ಲರ ಮೇಲೆ ನಮ್ಮ ಬೇಡಿಕೆ ಕುರಿತಾಗಿ ಧ್ವನಿ ಎತ್ತುವಂತೆ ಒತ್ತಡ ಹೇರಲಿದ್ದೇವೆ.